Advertisement

‘ಕಾಣದಾ ಕಡಲಿಗೆ’ ಹಾಡಿನಲ್ಲಿ ಮೋಡಿ ಮಾಡಿದ ರಾಯಚೂರು ಎಸ್.ಪಿ.

09:55 AM Nov 04, 2019 | Hari Prasad |

ರಾಯಚೂರು: ಪರಿಸರ ಕಾಳಜಿ, ರಕ್ತದಾನ ಶಿಬಿರ ಸೇರಿದಂತೆ ಹಲವಾರು ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಜನಾಭಿಮಾನಕ್ಕೆ ಪಾತ್ರರಾಗಿದ್ದ ರಾಯಚೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಇಂದು ತಮ್ಮಲ್ಲಿರುವ ಗಾಯನ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

Advertisement

ನಗರದ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆಯಿಂದ ರವಿವಾರ ಸಂಜೆ  ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸ್ವತಃ ತಾವೇ ಮೈಕ್ ಹಿಡಿದ ಎಸ್.ಪಿ. ಅವರು ಕನ್ನಡದ ಖ್ಯಾತ ಸಾಹಿತಿ ಜಿ.ಎಸ್.ಶಿವರುದ್ರಪ್ಪನವರ ‘ಕಾಣದಾ ಕಡಲಿಗೆ ಹಂಬಲಿಸಿದೆ ಮನ..’ ಎನ್ನುವ ಜನಪ್ರಿಯ ಭಾವಗೀತೆಯನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಸಭೆಯಲ್ಲಿ ನೆರೆದಿದ್ದವರ ಮನಸ್ಸನ್ನು ಸೂರೆಗೊಂಡರು.

ಡಾ. ವೇದಮೂರ್ತಿ ಅವರು ಸಿರಿಕಂಠದ ಗಾಯಕ ದಿವಂಗತ ಅಶ್ವಥ್ ಅವರ ಧ್ವನಿಯಲ್ಲೇ ಈ ಹಾಡನ್ನು ಹಾಡುವ ಮೂಲಕ ಸಭೆಯಲ್ಲಿದ್ದವರಿಗೆ ಕನ್ನಡದ ಈ ಮೇರು ಗಾಯಕನ ನೆನಪನ್ನು ಮತ್ತೊಮ್ಮೆ ಮಾಡಿಸಿದರು. ಎಸ್.ಪಿ.ಯವರು ತಮ್ಮ ಸುಶ್ರಾವ್ಯ ಕಂಠಸಿರಿಯಲ್ಲಿ ಹಾಡುತ್ತಿದ್ದರೆ ಸಭಿಕರು ಮತ್ತು ವೇದಿಕೆಯಲ್ಲಿದ್ದವರು ಹಾಡಿನ ತಾಳಕ್ಕೆ ಚಪ್ಪಾಳೆ ತಟ್ಟುತ್ತಾ ತಮ್ಮ ಸಂಗೀತಾಭಿಮಾನವನ್ನು ಮೆರೆದರು.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಕಿರುತೆರೆ ನಟಿ ಮೀನಾ ಅವರು ಅತಿಥಿಯಾಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ್, ಕಾರ್ಯದರ್ಶಿ ಮಾರುತಿ ಬಡಿಗೇರ್, ಕಸಾಪ ಜಿಲ್ಲಾಧ್ಯಕ್ಷ ಬಸವಪ್ರಭು ಪಾಟೀಲ್ ಬೆಟ್ಟದೂರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next