Advertisement

ಕೊರೊನಾ ಭೀತಿ ಮಾಧ್ಯಮಗಳ ಸೃಷ್ಟಿ

06:13 PM Mar 11, 2020 | Naveen |

ರಾಯಚೂರು: ಕೊರೊನಾ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅನಗತ್ಯ ಭಯ ಸೃಷ್ಟಿಸಲಾಗುತ್ತಿದೆ. ಇದು ಅಂಥ ಮಾರಕ ಕಾಯಿಲೆಯಲ್ಲ. ಈ ಬಗ್ಗೆ ಜನ ಆತಂಕಪಡದೆ ಕೆಲ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿದರೆ ಸಾಕು ಎಂದು ಮೂಳೆ ತಜ್ಞ ಡಾ| ಸಿ.ಅನಿರುದ್ಧ ಕುಲಕರ್ಣಿ ಹೇಳಿದರು.

Advertisement

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್‌ ಕ್ರಾಸ್‌ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಕೊರೊನಾ ವೈರಸ್‌ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. 760 ಕೋಟಿಗೂ ಅಧಿಕ ಜನಸಂಖ್ಯೆ ಇರುವ ವಿಶ್ವದಲ್ಲಿ ಈವರೆಗೆ ಕೊರೊನಾ ಸೋಂಕು ಪತ್ತೆಯಾಗಿರುವುದು 1.1 ಲಕ್ಷ ಜನರಲ್ಲಿ ಮಾತ್ರ. ಅದರಲ್ಲಿ ತೀವ್ರ ಸೋಂಕಿನ ಕಾರಣಕ್ಕೆ 3,816 ಜನ ಮೃತಪಟ್ಟಿದ್ದಾರೆ. ಈ ಹಿಂದೆ ಪ್ಲೇಗ್‌, ಕಾಲರಾ, ಸಾರ್ಸ್‌ ಹಾಗೂ ಡೆಂಘೀಯಂಥ ಸಾಂಕ್ರಾಮಿಕ ರೋಗಗಳು ಬಂದಾಗ ಲಕ್ಷಾಂತರ ಜನ ಮೃತಪಟ್ಟಿದ್ದಾರೆ. ಅವುಗಳಿಗೆ ಹೋಲಿಸಿದರೆ ಕೊರೊನಾ ಸೃಷ್ಟಿಸಿದ ಅಪಾಯ ತುಂಬಾ ಕಡಿಮೆ.

ಒಣ ಕೆಮ್ಮು, ಮೂಗು ಸೋರುವಿಕೆ, ಜ್ವರ, ಉಸಿರಾಟದ ತೊಂದರೆ ಹಾಗೂ ಗಂಟಲು ನೋವು ಕೊರೊನಾದ ಪ್ರಮುಖ ಲಕ್ಷಣಗಳು. ಸೋಂಕು ತಗುಲಿದ 14-18 ದಿನಗಳ ನಂತರ ರೋಗ ಲಕ್ಷಣ ತಿಳಿಯಲಿದೆ. ಸಾಮಾನ್ಯ ಚಿಕಿತ್ಸೆಯಿಂದಲೇ ಈ ಕಾಯಿಲೆ ನಿಯಂತ್ರಿಸುತ್ತಿರುವುದು ಗಮನಿಸಲಾಗಿದೆ. ದೇಹದ ತುಂಬಾ ಸೋಂಕು ಹರಡಿ ತೀವ್ರ ಅಸ್ವಸ್ಥತೆಗೆ ಒಳಗಾದವರು ಮಾತ್ರ ಮೃತಪಟ್ಟಿದ್ದಾರೆ ಎಂದು ವಿವರಿಸಿದರು.

ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ| ಪ್ರಾಣೇಶ ಕುಲಕರ್ಣಿ ಮಾತನಾಡಿ, ಚೀನಾದಲ್ಲಿ ಸಿಕ್ಕ ಜೀವಿಗಳನ್ನೆಲ್ಲಾ ತಿನ್ನುವ ಅನಾರೋಗ್ಯಕರ ಆಹಾರ ಪದ್ಧತಿ ಇದೆ. ಈ ಕಾರಣಕ್ಕೆ ಈವರೆಗೆ ಆ ದೇಶದಲ್ಲಿ ಅನೇಕ ರೋಗಗಳು ಹುಟ್ಟಿಕೊಂಡಿವೆ. ಭಾರತದ ಸಂಸ್ಕೃತಿ ಹಾಗೂ ಸಂಪ್ರದಾಯದಲ್ಲಿ ಶುಚಿತ್ವ ಹಾಗೂ ಪರಿಶುದ್ಧತೆಗೆ ಮಹತ್ವ ನೀಡಲಾಗಿದೆ. ಹೀಗಾಗಿ ಕುಂಭ ಮೇಳದಂಥ ಮಹಾ ಕಾರ್ಯಕ್ರಮ ನಡೆದರೂ ಯಾವುದೇ ರೋಗ ಹುಟ್ಟಿಕೊಂಡಿಲ್ಲ ಎಂದರು.

ಪ್ರಾಚಾರ್ಯ ಡಾ| ದಸ್ತಗೀರ್‌ಸಾಬ್‌ ದಿನ್ನಿ ಅಧ್ಯಕ್ಷತೆ ವಹಿಸಿದ್ದರು. ರೆಡ್‌ ಕ್ರಾಸ್‌ ಸಂಸ್ಥೆಯ ವಿದ್ಯಾಸಾಗರ ಸಿ., ಅತಾವುಲ್ಲಾ, ಪ್ರಾಧ್ಯಾಪಕರಾದ ಆರ್‌.ಮಲ್ಲನಗೌಡ, ಡಾ| ಶಿವಯ್ಯ, ಮಹಾದೇವಪ್ಪ, ಪುಷ್ಪಾ, ಸಪ್ನಾ, ಇಶ್ರತ್‌ ಬೇಗಂ, ವಿಜಯ ಸರೋದೆ, ರಾಮಚಂದ್ರ ಗಬ್ಬೂರು ಸೇರಿ ಇತರರಿದ್ದರು. ಎಂ.ರವಿ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next