Advertisement

ಬಿಸಿಲೂರು ರಾಯಚೂರಲ್ಲಿ ಸಮ್ಮಿಶ್ರ ಆಡಳಿತದ್ದೇ ವೈಖರಿ: 7 ಕ್ಷೇತ್ರಗಳು

12:41 AM Jan 28, 2023 | Team Udayavani |

ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ರಾಯಚೂರು ಜಿಲ್ಲೆಯಲ್ಲಿ ಇಂದಿಗೂ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ನಡುವೆ ಸಮಬಲದ ಹೋರಾಟ ನಡೆಯುತ್ತಿದೆ. ಆದರೆ ಒಮ್ಮೆಯೂ ಸಿಎಂ, ಡಿಸಿಎಂನಂಥ ಹುದ್ದೆ ಈ ಜಿಲ್ಲೆಗೆ ಸಿಕ್ಕಿಲ್ಲ, ಸಚಿವ ಸ್ಥಾನವೂ ಕಷ್ಟ ಎಂಬ ಕೊರಗೂ ಈ ಜಿಲ್ಲೆಗಿದೆ.

Advertisement

ರಾಯಚೂರು: ಒಂದು ಕಾಲದಲ್ಲಿ ಕಾಂಗ್ರೆಸ್‌ಮಯವಾಗಿದ್ದ ರಾಯಚೂರು ಜಿಲ್ಲೆಯಲ್ಲಿ ಈಚೆಗೆ ಯಾವುದೇ ಪಕ್ಷಕ್ಕೂ ಸಂಪೂರ್ಣ ಹಿಡಿತ ಸಿಗುತ್ತಿಲ್ಲ. ಮತದಾರನ ಪ್ರಬುದ್ಧತೆಯೋ, ವ್ಯಕ್ತಿ ಆಧಾರಿತ ಚುನಾವಣೆಯೋ, ರಾಜಕೀಯ ಪಕ್ಷಗಳ ಅಸ್ಥಿರತೆಯೋ ಜಿಲ್ಲೆಯ ರಾಜಕೀಯ ಯಾರೊಬ್ಬರ ಹಿಡಿತದಲ್ಲಿ ಬಂಧಿಯಾಗಿಲ್ಲ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹೆಚ್ಚು-ಕಡಿಮೆ ಸಮಬಲದ ಸೆಣಸಾಟ ನಡೆಸುತ್ತಲೇ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ.

ಒಂದೆರಡು ದಶಕಗಳ ಹಿಂದೆ ಕಾಂಗ್ರೆಸ್‌ ಸಂಪೂರ್ಣ ಹಿಡಿತ ಸಾಧಿಸಿತ್ತು. ಅನಂತರ ಜನತಾದಳ, ಜೆಡಿಯು, ಜೆಡಿಎಸ್‌ ಪ್ರಾಬಲ್ಯ ಸಾಧಿಸಿದರೆ ಈಚೆಗೆ ಬಿಜೆಪಿ ತನ್ನ ಬೇರು ಬಿಡುತ್ತಿದೆ. ಬಂಡಾಯದ ನೆಲ ಎಂದೇ ಖ್ಯಾತಿ ಹೊಂದಿದ ಈ ಜಿಲ್ಲೆಯಲ್ಲಿ ಮೊದಲಿನ ರಾಜಕೀಯ ಚಿತ್ರಣವೇ ಬೇರೆಯಾಗಿತ್ತು. ಮಹಿಳೆಯರಿಗೆ ಮುಕ್ತ ಸ್ವಾತಂತ್ರ್ಯ ಇಲ್ಲದ ಕಾಲದಲ್ಲೇ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ನೀಡಿತ್ತು ಈ ಜಿಲ್ಲೆ. ಮಾನ್ವಿ ಕ್ಷೇತ್ರದಲ್ಲಿ ಮೊದಲೆರಡು ಬಾರಿ ಗೆಜ್ಜಲಗಟ್ಟಿ ಬಸವರಾಜೇಶ್ವರಿ ಗೆದ್ದರೆ, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ನಾಗಮ್ಮ ಗೆದ್ದು ಪುರುಷರಿಗೆ ಸಡ್ಡು ಹೊಡೆದಿದ್ದರು. ಅದಾದ ಬಳಿಕವೂ ಅನೇಕ ಮಹಿಳೆಯರು ಜಿಲ್ಲೆಯ ರಾಜಕೀಯದಲ್ಲಿ ಹೆಗ್ಗುರುತು ಮೂಡಿಸಿದ್ದಾರೆ. ರಾಯಚೂರು ನಗರ, ಗ್ರಾಮೀಣ, ಮಾನ್ವಿ, ಸಿಂಧನೂರು, ದೇವದುರ್ಗ, ಲಿಂಗಸುಗೂರು ಹಾಗೂ ಈಚೆಗೆ ಅಸ್ತಿತ್ವಕ್ಕೆ ಬಂದ ಮಸ್ಕಿ ಸಹಿತ ಏಳು ವಿಧಾನಸಭೆ ಕ್ಷೇತ್ರಗಳಿವೆ. ಎರಡು ಸಾಮಾನ್ಯ, ಒಂದು ಪರಿಶಿಷ್ಟ ಜಾತಿ ಹಾಗೂ ನಾಲ್ಕು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾಗಿವೆ.

ರಾಯಚೂರು ನಗರ
ರಾಯಚೂರು ನಗರ ಕ್ಷೇತ್ರವನ್ನು ಕಾಂಗ್ರೆಸ್‌ ಅಲ್ಪಸಂಖ್ಯಾಕರಿಗೆ ಮೀಸಲಿಟ್ಟಿದೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾಕರ ಮತಗಳುಕಾಂಗ್ರೆಸ್‌ ಗೆ ಭದ್ರ ಓಟ್‌ಬ್ಯಾಂಕ್‌ ರೀತಿ ನಿರ್ಮಾಣಗೊಂಡಿದೆ. ಈ ಕ್ಷೇತ್ರ 16 ಚುನಾವಣೆ ಎದುರಿಸಿದ್ದು, ಅದರಲ್ಲಿ ಎಂಟು ಬಾರಿ ಕಾಂಗ್ರೆಸ್‌ ಗೆದ್ದು ಬೀಗಿದೆ. ಕಾಂಗ್ರೆಸ್‌ ಇಲ್ಲಿ ಅತೀ ಹೆಚ್ಚು ಬಾರಿ ಅಲ್ಪಸಂಖ್ಯಾಕರನ್ನೇ ಕಣಕ್ಕಿಳಿಸಿದ್ದು, ಏಳು ಬಾರಿ ಗೆಲುವು ಸಾಧಿ ಸಿದ್ದಾರೆ. 1952ರಲ್ಲಿ ಮೊದಲ ಬಾರಿಗೆ ಎಲ್‌.ಕೆ.ಸರಾಫ್‌ ಕಾಂಗ್ರೆಸ್‌ನಿಂದ ಗೆದ್ದಿದ್ದರು. ನಜೀರ್‌ ಅಹ್ಮದ್‌ ಸಿದ್ಧಿಕಿ, ಜಾಫರ್‌ ಶರೀಫ್‌ ಸಂಬಂ  ಸೆ„ಯದ್‌ ಯಾಸಿನ್‌ ಎರಡು ಬಾರಿ ಗೆದ್ದಿದ್ದಾರೆ. ಜನತಾದಳ ಮೂಲಕ ಎರಡು ಬಾರಿ ಗೆದ್ದಿದ್ದ ಎಂ.ಎಸ್‌.ಪಾಟೀಲ್‌ ಸಚಿವಗಿರಿ ಪಡೆದಿದ್ದರು. ಎ.ಪಾಪಾರೆಡ್ಡಿ ಗೆಲ್ಲುವ ಮೂಲಕ ಬಿಜೆಪಿ ಖಾತೆ ತೆರೆದಿದ್ದು, ಕಳೆದ ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ಶಿವರಾಜ್‌ ಪಾಟೀಲ್‌ ಈ ಬಾರಿ ಬಿಜೆಪಿಯಿಂದ ಗೆದ್ದು ಶಾಸಕರಾ ಗಿದ್ದಾರೆ.

ರಾಯಚೂರು ಗ್ರಾಮೀಣ
ಮತದಾರ ಸದಾ ಬದಲಾವಣೆ ಬಯಸುವುದು ಈ ಕ್ಷೇತ್ರದ ವಿಶೇಷತೆ. ಮೊದಲಿಗೆ ಈ ಕ್ಷೇತ್ರವನ್ನು ರಾಯಚೂರು-2 ಎನ್ನಲಾಗುತ್ತಿತ್ತು. ಆರಂಭದಲ್ಲಿ ನಾಗಮ್ಮ ಎನ್ನುವ ಬಡ ಮಹಿಳೆ ಕಾಂಗ್ರೆಸ್‌ನಿಂದ ಗೆದ್ದು ಗಮನ ಸೆಳೆದಿದ್ದರು. ಬೀಡಿ ಸೇದುತ್ತಿದ್ದ ಈ ಮಹಿಳೆ ಬೀಡಿ ನಾಗಮ್ಮ ಎಂದೇ ಖ್ಯಾತಿ ಹೊಂದಿದ್ದರು ಎನ್ನಲಾಗುತ್ತಿದೆ. ಅನಂತರ ಇದು ರಾಯಚೂರು, ಮಾನ್ವಿ ಮತ್ತು ದೇವದುರ್ಗದ ಕೆಲವು ತಾಲೂಕುಗಳನ್ನು ಒಳಗೊಂಡು ಕಲ್ಮಲಾ ಕ್ಷೇತ್ರವಾಯಿತು. ಈಗ ರಾಯಚೂರು ಗ್ರಾಮೀಣ ಕ್ಷೇತ್ರವಾಗಿದೆ. ಇಲ್ಲಿಯೂ ಒಂದೇ ಪಕ್ಷ ಪ್ರಾಬಲ್ಯ ಸಾಧಿಸಿಲ್ಲ. ಆರಂಭದಲ್ಲಿ ಕಾಂಗ್ರೆಸ್‌ ಗೆಲುವು ದಾಖಲಿಸಿದರೆ ಅನಂತರದ ದಿನಗಳಲ್ಲಿ ಜನತಾದಳ, ಜೆಡಿಎಸ್‌, ಈಚೆಗೆ ಬಿಜೆಪಿ ಕೂಡ ಗೆಲುವು ದಾಖಲಿಸಿದೆ. 1978, 1983 ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ಸು ಧೀಂದ್ರ ರಾವ್‌ ಕಸಬೆ ಸಚಿವರಾದರೆ, 1999ರಲ್ಲಿ ಕಾಂಗ್ರೆಸ್‌ನಿಂದ ಗೆದ್ದ ರಾಜಾ ಅಮರೇಶ್ವರ ನಾಯಕರೂ ಸಚಿವರಾಗಿದ್ದರು.

Advertisement

ಮಾನ್ವಿ
ಈ ಕ್ಷೇತ್ರದಲ್ಲಿ ನಡೆದ 15 ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್‌ ಗೆದ್ದಿದ್ದರೆ, ಬಿಜೆಪಿ ಒಮ್ಮೆಯೂ ಖಾತೆ ತೆರೆದಿಲ್ಲ ಎನ್ನುವುದು ಇತಿಹಾಸ. ಸತತ ಎರಡು ಬಾರಿ ಕಾಂಗ್ರೆಸ್‌ ನಿಂದ ಬಸವರಾಜೇಶ್ವರಿ ಗೆಲುವು ಸಾಧಿಸಿರುವುದು ವಿಶೇಷ. 2008ರ ವರೆಗೆ ಈ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. 1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಅತ ನೂರು ಪಂಪನ ಗೌಡ ಗೆದ್ದಿದ್ದರು. 1985ರ ವರೆಗೆ ಇಲ್ಲಿ ಕಾಂಗ್ರೆಸ್‌ನದ್ದೇ ಪಾರುಪತ್ಯವಿತ್ತು. 1985ರಲ್ಲಿ ಜೆಎನ್‌ಪಿ ಪಕ್ಷದಿಂದ ತಿಮ್ಮನಗೌಡ ಆನ್ವರಿ ಗೆದ್ದು ಕಾಂಗ್ರೆಸ್‌ ಗೆಲುವಿಗೆ ಬ್ರೇಕ್‌ ಹಾಕಿದರು. ಪುನಃ 1999ರಲ್ಲಿ ಕಾಂಗ್ರೆಸ್‌ನಿಂದ ಎನ್‌.ಎಸ್‌.ಬೋಸರಾಜ್‌ ಹಾಗೂ ಹಂಪಯ್ಯ ನಾಯಕ ತಲಾ ಎರಡು ಬಾರಿ ಗೆದ್ದು ಕಾಂಗ್ರೆಸ್‌ ಗೆಲುವಿನ ನಾಗಾಲೋಟ ಮುಂದುವರಿಸಿದರು. ಜೆಡಿಎಸ್‌ನ ರಾಜಾ ವೆಂಕಟಪ್ಪ ನಾಯಕ ಹಾಲಿ ಶಾಸಕ.

ಲಿಂಗಸುಗೂರು
2004ರ ವರೆಗೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಲಿಂಗಸುಗೂರು ಕ್ಷೇತ್ರ ಈಗ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. 15 ಚುನಾವಣೆಗಳು ನಡೆದಿದ್ದು, ಎಂಟು ಬಾರಿ ಕಾಂಗ್ರೆಸ್‌ ಗೆದ್ದಿದೆ. ಮಾಜಿ ಸಚಿವ, ಹಾಲಿ ಕುಷ್ಟಗಿ ಶಾಸಕ ಅಮರೇಗೌಡ ಬಯ್ನಾಪುರ ಈ ಮುಂಚೆ ಇದೇ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಬಾರಿಸಿದ್ದರು. 1994ರಲ್ಲಿ ಜನತಾದಳ, 1999ರಲ್ಲಿ ಜೆಡಿಯು ಹಾಗೂ 2004ರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದರು. 1989ರಲ್ಲಿ ಕಾಂಗ್ರೆಸ್‌ನಿಂದ ರಾಜಾ ಅಮರೇಶ್ವರ ನಾಯಕ ಗೆದ್ದು ಸಚಿವರಾದರು. 1994ರಲ್ಲಿ ರಾಜಾ ಅಮರೇಶ್ವರ ನಾಯಕ ಹಾಗೂ ಅವರ ಮಾವ ರಾಜಾ ಅಮರಪ್ಪ ನಾಯಕರ ನಡುವಿನ ಪೈಪೋಟಿ ಕಾರಣ ಜನತಾದಳದ ಬಯ್ನಾ ಪುರ ಗೆದ್ದಿದ್ದರು. 2008ರಲ್ಲಿ ಬಿಜೆಪಿಯಿಂದ ಹಾಗೂ 2013ರಲ್ಲಿ ಜೆಡಿಎಸ್‌ನಿಂದ ಮಾನಪ್ಪ ವಜ್ಜಲ್‌ ಜಯಗಳಿಸಿದ್ದರು. ಇನ್ನು 25 ವರ್ಷ ಬಳಿಕ 2018ರಲ್ಲಿ ಕಾಂಗ್ರೆಸ್‌ ಗೆದ್ದಿದ್ದು, ಡಿ.ಎಸ್‌. ಹೂಲಗೇರಿ ಶಾಸಕರಾಗಿದ್ದಾರೆ.

ಮಸ್ಕಿ
2008ರಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಕ್ಷೇತ್ರ ಮಸ್ಕಿ. ಪರಿಶಿಷ್ಟ ಜಾತಿಗೆ ಮೀಸಲು. ಮೂರು ಸಾರ್ವತ್ರಿಕ ಚುನಾವಣೆ ಹಾಗೂ ಒಮ್ಮೆ ಉಪಚುನಾವಣೆ ನಡೆದಿದೆ. ಸಮ್ಮಿಶ್ರ ಸರಕಾರ ಪತನಗೊಳಿಸಿ ಬಿಜೆಪಿ ಸರಕಾರದ ರಚನೆಗೋಸ್ಕರ ಮೊದಲಿಗೆ ರಾಜೀನಾಮೆ ಕೊಟ್ಟಿದ್ದು ಈ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಪ್ರತಾಪಗೌಡ ಪಾಟೀಲ್‌. ಈ ನಡೆಯಿಂದ ಜನವಿರೋಧ ಕಟ್ಟಿಕೊಂಡು ಉಪಚುನಾವಣೆಯಲ್ಲಿ ಹೀನಾಯ ಸೋಲುಂಡರು. ಆದರೆ 2008ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಪ್ರತಾಪ ಗೌಡ, 2013ರಲ್ಲಿ ಕಾಂಗ್ರೆಸ್‌ನಿಂದ ಗೆದ್ದರು. 2018ರಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಸ್ಪಧಿ ìಸಿ ಕೇವಲ 213 ಅಂತರದಿಂದ ಗೆದ್ದು ಹ್ಯಾಟ್ರಿಕ್‌ ಬಾರಿಸಿದ್ದರು. ಸಚಿವ ಸ್ಥಾನಕ್ಕೆ ಪರಿಗಣಿಸಲಿಲ್ಲ ಎಂಬ ಅಸಮಾಧಾನದಿಂದ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದರು. ಕಾಂಗ್ರೆಸ್‌ನ ಬಸನಗೌಡ ತುರ್ವಿಹಾಳ ಹಾಲಿ ಶಾಸಕ.

ಸಿಂಧನೂರು
ಚುನಾವಣೆ ಆರಂಭವಾದಾಗಿನಿಂದ ಸಾಮಾನ್ಯ ಕ್ಷೇತ್ರವಾಗಿಯೇ ಉಳಿದಿರುವುದು ಈ ಕ್ಷೇತ್ರದ ವೈಶಿಷ್ಟ್ಯ. ಈ ಕ್ಷೇತ್ರದಲ್ಲಿ ನಡೆದ 15 ಚುನಾವಣೆಗಳಲ್ಲಿ ಎಂಟು ಬಾರಿ ಕಾಂಗ್ರೆಸ್‌ ಗೆದ್ದು ಬೀಗಿದೆ. ಒಮ್ಮೆ ಜನತಾದಳ, ಒಮ್ಮೆ ಜೆಡಿಯು, ಎರಡು ಬಾರಿ ಜೆಡಿಎಸ್‌ ಗೆದ್ದರೆ, ಬಿಜೆಪಿ ಒಮ್ಮೆಯೂ ಈ ಕ್ಷೇತ್ರದಲ್ಲಿ ಗೆದ್ದಿಲ್ಲ. 1952ರಲ್ಲಿ ಮೊದಲ ಬಾರಿಗೆ ಶಿವಬಸನಗೌಡ ಗುಡದೂರು ಪಕ್ಷೇತರ ಶಾಸಕರಾಗಿ ಆಯ್ಕೆಯಾದರು. ಅನಂತರ ಖಾತೆ ತೆರೆದ ಕಾಂಗ್ರೆಸ್‌ ನಿರಂತರವಾಗಿ ಗೆದ್ದಿದೆ. 1989ರಲ್ಲಿ ಜನತಾದಳದ ಮೂಲಕ ಬಾದರ್ಲಿ ಹಂಪನಗೌಡ ಗೆಲುವು ದಾಖಲಿಸಿದರು. ಆಮೇಲೆ ಒಮ್ಮೆ ಜೆಡಿಯು, ಎರಡು ಬಾರಿ ಕಾಂಗ್ರೆಸ್‌ನಿಂದಲೂ ಗೆಲ್ಲುವ ಮೂಲಕ ನಾಲ್ಕು ಬಾರಿ ಶಾಸಕರಾದರು. ಈಗ ಜೆಡಿಎಸ್‌ನ ವೆಂಕಟರಾವ್‌ ನಾಡಗೌಡ ಶಾಸಕ.

ದೇವದುರ್ಗ
ಇತ್ತೀಚಿನ ದಿನಗಳಲ್ಲಿ ಕುಟುಂಬ ರಾಜಕಾರಣಕ್ಕೆ ಹೆಸರಾದ ಕ್ಷೇತ್ರ ದೇವದುರ್ಗ. 1952ರಲ್ಲಿ ಕಾಂಗ್ರೆಸ್‌ನಿಂದ ಕರಿಬಸಪ್ಪ ವಕೀಲ ಗೆಲುವು ದಾಖಲಿಸುವ ಮೂಲಕ ಆ ಪಕ್ಷದ ರಾಜಕೀಯ ಶುರುವಾಗಿತ್ತು. ಸಾಮಾನ್ಯ ವರ್ಗ, ಅನಂತರ ಪರಿಶಿಷ್ಟ ಜಾತಿ ಈಗ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರವಾಗಿದ್ದು, ಎಲ್ಲ ಪಕ್ಷಗಳಿಗೂ ವೇದಿಕೆ ಕಲ್ಪಿಸಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಎನ್‌ಆರ್‌ಬಿಸಿ ಮೂಲಕ ಈ ಕ್ಷೇತ್ರಕ್ಕೆ ನೀರುಣಿಸಿದರು ಎನ್ನುವ ಅಭಿಮಾನ ಕ್ಷೇತ್ರದ ಜನರಲ್ಲಿದ್ದು, ಜೆಡಿಎಸ್‌ಗೆ ಮತದಾರರ ಒಲವಿದೆ. ಇಲ್ಲಿ 16 ಬಾರಿ ಚುನಾವಣೆ ನಡೆದಿದ್ದು, ಎಂಟು ಬಾರಿ ಕಾಂಗ್ರೆಸ್‌ ಗೆದ್ದರೆ, ಮೂರು ಬಾರಿ ಜೆಡಿಎಸ್‌, ಮೂರು ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಜೆಡಿಎಸ್‌ನಿಂದ ಮೊದಲ ಬಾರಿ ಗೆದ್ದರೂ “ಆಪರೇಶನ್‌ ಕಮಲದಿಂದ ಕೇವಲ 35 ದಿನಗಳಲ್ಲೇ ರಾಜೀನಾಮೆ ಕೊಟ್ಟ ಕೆ.ಶಿವನಗೌಡ ನಾಯಕರ ಕ್ಷೇತ್ರ ಇದೇ. 1985ರಲ್ಲಿ ಜೆಎನ್‌ಪಿ ಪಕ್ಷದಿಂದ ಎ.ಪುಷ್ಪಾವತಿ, 1994ರಲ್ಲಿ ಹೋರಾಟಗಾರ್ತಿ ಬಿ.ಟಿ.ಲಲಿತಾ ನಾಯಕ ಜನತಾದಳದಿಂದ ಗೆದ್ದಿ ದ್ದರು. ಈಗ ಕಾಂಗ್ರೆಸ್‌ ಪ್ರಾಬಲ್ಯ ಕುಗ್ಗಿದೆ. ಹಾಲಿ ಬಿಜೆಪಿಯ ಶಿವ ನ ಗೌಡ ನಾಯಕ ಶಾಸಕ. ಮಾಜಿ ಸಂಸದ ವೆಂಕಟೇಶ ನಾಯಕ ಕುಟುಂಬ ರಾಜಕಾರಣ ಪ್ರಾಬಲ್ಯ ಮೆರೆಯುತ್ತಿದೆ.

-ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next