ರಾಯಚೂರು: ನಗರದ ಪುರಾತತ್ವ ಇಲಾಖೆಗೆ ಸಂಬಂಧಿಸಿದ ಕಾಟೆ ದರವಾಜ ಕೋಟೆಗೆ ಹೊಂದಿಕೊಂಡು ನಿರ್ಮಿಸುತ್ತಿರುವ ಮಸೀದಿ ಕಮಾನು ಇದೀಗ ಕೋಮು ಸಂಘರ್ಷಕ್ಕೆಡೆ ಮಾಡಿದೆ.
ತೀನ್ ಕಂದಿಲ್ ಬಳಿಯ ಹಜರತ್ ಸೈಯದ್ ಶಾಹ ಅಲ್ಲಾವುದ್ದೀನ್ ದರ್ಗಾಕ್ಕೆ ಕಮಾನು ನಿರ್ಮಿಸಲಾಗುತ್ತಿದೆ. ಆದರೆ, ಕಮಾನು ನಿರ್ಮಿಸುತ್ತಿರುವ ಜಾಗ ಪುರಾತತ್ವ ಇಲಾಖೆಗೆ ಸಂಬಂಧಿಸಿದ್ದು ಕೂಡಲೆ ತೆರವು ಮಾಡುವಂತೆ ಆಗ್ರಹಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಸಂರಕ್ಷಿತ ಸ್ಮಾರಕದ 100 ಮೀ ಅಂತರದೊಳಗೆ ಕಮಾನು ನಿರ್ಮಾಣ ಮಾಡಲಾಗುತ್ತಿದೆ ಎಂದು ನಾಯಕರು ದೂರಿದ್ದಾರೆ.
ಇದಕ್ಕೆ ಮುಸ್ಲಿಂ ಸಮುದಾಯದಿಂದ ಪ್ರತಿರೋಧ ವ್ಯಕ್ತವಾಗಿದೆ. ಈ ವೇಳೆ ಪರಸ್ಪರ ಎರಡೂ ಗುಂಪುಗಳಿಂದ ತಮ್ಮ ತಮ್ಮ ವಿಚಾರಗಳ ಬಗ್ಗೆ ಘೋಷಣೆ ಕೂಗಲಾಗಿದೆ. ಬಿಜೆಪಿ ಕಾರ್ಯಕರ್ತರಿಂದ ಸ್ಥಳದಲ್ಲೇ ಜೈ ಶ್ರೀರಾಮ ಘೋಷಣೆ ಮಾಡುತ್ತಿದ್ದಂತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರಿಂದ ಹೆಚ್ಚಿನ ಬಂದೋಬಸ್ತ್ ಕಲ್ಪಿಸಿ ಪರಿಸ್ಥಿತಿ ನಿಯಂತ್ರಿಸಲಾಯಿತು. ನಂತರ ಎರಡು ತಂಡಗಳ ನಾಯಕರು ನಗರಸಭೆಗೆ ತೆರಳಿ ಪೌರಾಯುಕ್ತರ ಜತೆ ಚರ್ಚಿಸಿದರು.
ಕಾಮಗಾರಿ ನಿಲ್ಲಿಸದಿದ್ದರೆ ಶುಕ್ರವಾರ ಡಿಸಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ನಾಯಕರು ಎಚ್ಚರಿಸಿದರು. ಮುಸ್ಲಿಂ ನಾಯಕರು ನಾವು ನಿಯಮ ಅನುಸಾರವಾಗಿಯೇ ಕಾಮಗಾರಿ ನಡೆಸುತ್ತಿದ್ದು, ಎಲ್ಲ ಅನುಮತಿ ಪಡೆಯಲಾಗಿದೆ. ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಿಸಬಾರದು ಎಂದು ಒತ್ತಾಯಿಸಿದ್ದಾರೆ.