Advertisement

ಕೊರೊನಾ ಸೋಂಕಿನಿಂದ ರಕ್ಷಣೆಗೆ ಆರಕ್ಷಕರ “ಆವಿ’ಷ್ಕಾರ!

10:54 PM Apr 29, 2021 | Team Udayavani |

ರಾಯಚೂರು: ಕೊರೊನಾ ವಾರಿಯರ್ಸ್‌ಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಆರಕ್ಷರ ರಕ್ಷಣೆಗಾಗಿ ಆವಿ (ಸ್ಟೀಮ್‌) ವ್ಯವಸ್ಥೆ ಮಾಡುವ ಮೂಲಕ ಪೊಲೀಸ್‌ ಇಲಾಖೆ ವಿಶೇಷ ಕಾಳಜಿ ವಹಿಸಿದೆ. ಇಲ್ಲಿನ ಡಿಎಆರ್‌ ಮುಖ್ಯ ಕಚೇರಿಯಲ್ಲಿ ಕರ್ತವ್ಯನಿರತ ಪೊಲೀಸರಿಗೆ ಸೋಂಕು ತಗುಲದಂತೆ ಆವಿ ತೆಗೆದುಕೊಳ್ಳುವ ಸುಲಭೋಪಾಯ ಕಂಡುಕೊಳ್ಳಲಾಗಿದೆ. ಕೊರೊನಾ ವೈರಸ್‌ ದೇಹ ಸೇರಲು ಎರಡೂರು ದಿನಗಳಾದರೂ ಬೇಕು. ಅಷ್ಟರೊಳಗೆ ಎಚ್ಚರಿಕೆ ವಹಿಸಿದಲ್ಲಿ ಸೋಂಕಿನಿಂದ ಪಾರಾಗಬಹುದು ಎಂಬ ಕಾರಣಕ್ಕೆ ಈ ಪ್ರಯೋಗ ಮಾಡಲಾಗಿದೆ. ಡಿಎಆರ್‌ ಡಿಎಸ್‌ಪಿ ಸುನಿಲ್‌ ಪರಪ್ಪ ಕೊಡಲಿ ನೇತೃತ್ವದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.

Advertisement

ಒಂದು ಸಿಲಿಂಡರ್‌, ಫ್ರೆಶರ್‌ ಕುಕ್ಕರ್‌, ಗ್ಯಾಸ್‌ ಬರ್ನರ್‌, ಒಂದೆರಡು ಪೈಪ್‌ ಬಳಸಿ ಅತ್ಯಂತ ಸರಳ ವಿಧಾನದ ಮೂಲಕ ಸ್ಟೀಮ್‌ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ನೀರು, ಪುದಿನಾ, ತುಳಜಿ, ನೀಲಗಿರಿ ಎಲೆ, ವಿಕ್ಸ್‌, ಜಂಡು ಬಾಮ್‌, ಪಚ್ಚ ಕರ್ಪೂರದ ಪುಡಿ ಹಾಕಲಾಗುತ್ತಿದೆ. ಕರ್ತವ್ಯಕ್ಕೆ ತೆರಳುವ ಮುನ್ನ, ಕರ್ತವ್ಯ ಮುಗಿಸಿಕೊಂಡು ಬಂದ ಬಳಿಕ ಪೊಲೀಸರು ಆವಿ ತೆಗೆದುಕೊಳ್ಳುವುದರಿಂದ ವೈರಸ್‌ ದೇಹ ಸೇರುವ ಸಾಧ್ಯತೆ ಇದ್ದರೂ ತಡೆಯಬಹುದು ಎನ್ನುವುದು ಅಧಿ ಕಾರಿಗಳ ವಿಶ್ಲೇಷಣೆ.

ಎಲ್ಲೆಡೆ ಜಾರಿಗೆ ಚಿಂತನೆ: ಈಗ ಡಿಎಆರ್‌ ಹೆಡ್‌ ಕ್ವಾಟರ್ಸ್‌ ನಲ್ಲಿ ಮಾತ್ರ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಮುಖ್ಯ ವಾಹಿನಿಯಲ್ಲಿ ಕೆಲಸ ಮಾಡುವ 100ಕ್ಕೂ ಅ ಧಿಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಆವಿ ಪಡೆದು ತೆರಳುತ್ತಾರೆ. ಬಳಿಕ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ತೆಗೆದುಕೊಂಡು ಹೋಗುತ್ತಾರೆ.

ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರಿಗೆ ಮನೆಯಲ್ಲಿ ಇಷ್ಟೆಲ್ಲ ವ್ಯವಸ್ಥೆ ಮಾಡಿಕೊಂಡು ಆವಿ ತೆಗೆದುಕೊಳ್ಳುವ ವ್ಯವಧಾನ ಇರುವುದಿಲ್ಲ. ಈ ಪದ್ಧತಿಯಿಂದ ಸೋಂಕು ತಗಲುವುದೇ ಇಲ್ಲವೆಂದಲ್ಲ. ಬರುವ ಸಾಧ್ಯತೆ ಕಡಿಮೆ. ಒಂದು ಸಿಲಿಂಡರ್‌ 7-8 ದಿನ ಬರಬಹುದು. ಕಡಿಮೆ ಖರ್ಚಿನಲ್ಲಿ ಆರೋಗ್ಯ ರಕ್ಷಣೆಗೆ ಉತ್ತಮ ಮಾರ್ಗ ಇದಾಗಿದ್ದು, ಜಿಲ್ಲೆಯ ಎಲ್ಲ ಠಾಣೆಗಳಲ್ಲೂ ಇದನ್ನು ಸ್ಥಾಪಿಸುವ ಕುರಿತು ಇಲಾಖೆ ಚಿಂತನೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next