ಹೊಸದಿಲ್ಲಿ: ಬೆಳಗಾವಿ ಹಿಂದೆ, ಮುಂದೆ ಮತ್ತು ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ, ಬೆಳಗಾವಿಯ ಒಂದಿಂಚೂ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯಸಭಾ ಸಂಸದ ಜಿ.ಸಿ ಚಂದ್ರಶೇಖರ್ ಹೇಳಿದರು.
ಸಂಸತ್ ನಲ್ಲಿ ಮಾತನಾಡಿದ ಅವರು, ಯಾವುದೇ ವಿವಾದವು ಸಂಘರ್ಷದಿಂದ ಬಗೆಹರಿಯುವುದಿಲ್ಲ, ಗಾಂಧಿಯವರ ಅಹಿಂಸಾ ಸಂದೇಶ ಪ್ರಪಂಚಕ್ಕೆ ಮಾನವೀಯತೆಯನ್ನು ಮೆರೆದಿದೆ. ಎಲ್ಲವೂ ನಶಿಸಿ ಹೋದಮೇಲೆ ಕೊನೆಗೆ ಮಾನವೀಯತೆ ಮಾತ್ರ ಉಳಿಯುತ್ತದೆ ಎಂದರು.
1956 ರಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಭಾಷಾವಾರು ಪ್ರಾಂತ್ಯ ವಿಂಗಡಣೆ ಆದಾಗನಿಂದಲೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಆದರೂ ಮಹಾರಾಷ್ಟ್ರದ ತಕರಾರಿನಿಂದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ದ ಮಹಾಜನ್ ಸಮಿತಿಯ ವರದಿ ಕೂಡ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದಿದೆ. ಆರ್ಟಿಕಲ್ 263 ಮತ್ತು 331 ಪ್ರಕಾರ ಗಡಿ ವಿವಾದ ಪರಸ್ಪರ ಮಾತುಕತೆಯಿಂದ ಸಾಧ್ಯವಾಗದೆ ಇದ್ದರೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಬೇಕೆಂದು ಹೇಳಿದೆ.
ಇದನ್ನೂ ಓದಿ:ಪ್ರವಾಸೋದ್ಯಮ ಇಲಾಖೆಯಿಂದ ಕಂಬಳಕ್ಕೆ ಉಡುಗೊರೆ: 1 ಕೋಟಿ ರೂ. ಸಹಾಯಧನ ಬಿಡುಗಡೆ
ಕೇವಲ ರಾಜಕೀಯ ಲಾಭಕ್ಕಾಗಿ ಸಂಘರ್ಷಕ್ಕೆ ಇಳಿದು ನಮ್ಮ ಸ್ವಾಭಿಮಾನದ ರಾಜ್ಯೋತ್ಸವಕ್ಕೆ ಶುಭಾಶಯಗಳು ಹೇಳುವ ಬದಲು ಅಂದೇ ಕರಾಳ ದಿನ ಆಚರಿಸಬೇಕೆಂದು ಕ್ಯಾಬಿನೆಟ್ ನಲ್ಲಿ ತೀರ್ಮಾನಿಸಿರುವುದು, ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಎನ್ನುವುದು, ಸೀಮಾ ಸಂಕಲ್ಪ ಎಂಬ ಹೆಸರಲ್ಲಿ ಬೆಳಗಾವಿಯನ್ನು ವಶಪಡಿಸಿಕೊಳ್ಳುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆಗಳಿಂದ ರಾಜ್ಯ ಹೊತ್ತಿ ಉರಿಯುತ್ತಿದೆ , ನಮ್ಮ ರಾಜ್ಯ ಸ್ವಾಭಿಮಾನದಿಂದ ಗಾಂಧಿ ಮಾರ್ಗದಲ್ಲೇ ಪ್ರತಿಭಟಿಸಿ ನಮ್ಮ ಗಡಿಭಾಗವನ್ನು ಸಂರಕ್ಷಿದ್ದೇವೆ ಹೊರತು, ಒಂದಿಂಚು ಜಾಗವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.