ಲಕ್ನೋ ಪರ ನಾಯಕ ಕೆ.ಎಲ್.ರಾಹುಲ್ ಸಿಡಿಯಲಿಲ್ಲ. ಈಗಾಗಲೇ ಅವರ ಬ್ಯಾಟಿಂಗ್ ಬಗ್ಗೆ ಅನುಮಾನಗಳಿವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಸತತ ವೈಫಲ್ಯ ಕಂಡು ಇತ್ತೀಚೆಗೆ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಮತ್ತೆ ಲಯಕ್ಕೆ ಮರಳಿದ್ದರು. ಬರೀ ಇಷ್ಟರಲ್ಲೇ ಅವರ ಸ್ಥಿತಿಯನ್ನು ನಿರ್ಧರಿಸಲು ಸಾಧ್ಯವಿಲ್ಲ. ಹಾಗಾಗಿ ಐಪಿಎಲ್ ಲಯ ರಾಹುಲ್‌ಗೂ, ಅವರ ತಂಡಕ್ಕೂ ಬಹಳ ನಿರ್ಣಾಯಕವಾಗಿದೆ. 12 ಎಸೆತ ಎದುರಿಸಿದ ಅವರು ಕೇವಲ 8 ರನ್ ಗಳಿಸಿದರು!
Advertisement
ಎಲ್ಲರೂ ರಾಹುಲ್ ಸಿಡಿಯಬಹುದೆಂದು ನಿರೀಕ್ಷಿಸುತ್ತಿದ್ದಾಗಲೇ ನ್ಯೂಜಿಲೆಂಡ್‌ನ ಕೈಲ್ ಮೇಯರ್ಸ್ ಮೆರೆದರು. ಅವರು 38 ಎಸೆತಗಳಲ್ಲಿ ಕೇವಲ ಎರಡೇ ಬೌಂಡರಿ ಬಾರಿಸಿದರು. ಆದರೆ 7 ಸಿಕ್ಸರ್‌ಗಳನ್ನು ಚಚ್ಚಿದರು! ಅವರ ಗಳಿಕೆ 73 ರನ್‌ಗಳು. ಇವರನ್ನು ಹೊರತುಪಡಿಸಿದರೆ ನಿಕೋಲಸ್ ಪೂರನ್ 21 ಎಸೆತಗಳಲ್ಲಿ 36, ಆಯುಷ್ ಬದೋನಿ 18 ರನ್ ಸಿಡಿಸಿದರು. ಇವರಲ್ಲಿ ಬದೋನಿ ಏಳೇ ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್‌ಗಳನ್ನು ಸಿಡಿಸಿ ತಂಡದ ಮೊತ್ತವನ್ನು ಉಬ್ಬಿಸಲು ನೆರವಾದರು. ಉಳಿದ ಯಾವುದೇ ಬ್ಯಾಟಿಗರೂ ನಿರೀಕ್ಷೆಗೆ ತಕ್ಕಂತೆ ಸಿಡಿಯಲಿಲ್ಲ.