ಪಕ್ಷದ ಅಧ್ಯಕ್ಷ ರಾಹುಲ್ ಜೀವಕ್ಕೆ ದೊಡ್ಡ ಪ್ರಮಾಣದ ಬೆದರಿಕೆ ಇದೆ ಅಲವತ್ತು ಕೊಂಡಿರುವ ಕಾಂಗ್ರೆಸ್, ಈ ಕುರಿತಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ರಾಹುಲ್ ಅವರಿಗೆ ನೀಡಲಾಗಿರುವ ಭದ್ರತೆ ಹೆಚ್ಚಿಸುವಂತೆ ಮನವಿ ಮಾಡಿದೆ.
ಅಮೇಠಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ ರಾಹುಲ್, ಸುದ್ದಿಗಾರರೊಂದಿಗೆ ಮಾತನಾಡುವಾಗ ಲೇಸರ್ ಅಥವಾ ಸ್ನೆ„ಪರ್ ಗನ್‌ಗಳಿಂದ ಹೊರಬರುವ ಕೆಂಪು ಬೆಳಕಿನ ಚುಕ್ಕಿಯನ್ನೇ ಹೋಲುವ “ಗಿಳಿ ಹಸಿರು’ ಬಣ್ಣದ ಬೆಳಕಿನ ಚುಕ್ಕೆಯೊಂದು ರಾಹುಲ್ ಅವರ ಹಣೆ, ಮುಂದಲೆಯ ಮೇಲೆ 7 ಬಾರಿ ಓಡಾಡಿತ್ತು. ಇದು ಮಾಧ್ಯಮಗಳ ಕ್ಯಾಮೆರಾಗಳಲ್ಲೂ ದಾಖಲಾಗಿದೆ.
ಇದನ್ನು ಪತ್ರದಲ್ಲಿ ಉಲ್ಲೇಖೀಸಿರುವ ಕಾಂಗ್ರೆಸ್, ರಾಹುಲ್ ಅವರ ಮೇಲೆ ಓಡಾಡಿದ ಬೆಳಕಿನ ಚುಕ್ಕೆಯು ಸ್ನೆ„ಪರ್ ಗನ್‌ಗಳಿಂದ ಹೊರಬರುವ ಚುಕ್ಕೆಗಳಿಗೆ ಹೋಲಿಕೆ ಇರುವುದರಿಂದ ಈ ಘಟನೆಯ ತನಿಖೆ ಆಗಬೇಕು ಎಂದು ಆಗ್ರಹಿಸಿದೆ. ಜತೆಗೆ, ರಾಹುಲ್ ಅವರಿಗೆ ನೀಡಲಾಗಿರುವ ಭದ್ರತೆಯನ್ನು ಯಾರು, ಯಾವ ಕ್ಷಣದಲ್ಲಿ ಬೇಕಾದರೂ ಭೇದಿಸಬಹುದಾಗಿದೆ ಎಂಬ ಆತಂಕ ವ್ಯಕ್ತಪಡಿಸಿದೆ. ಪತ್ರಕ್ಕೆ ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್, ಜೈರಾಂ ರಮೇಶ್ ಮತ್ತು ರಣದೀಪ್ ಸುಜೇವಾಲ ಸಹಿ ಹಾಕಿದ್ದಾರೆ.
ಕೇಂದ್ರದ ಸ್ಪಷ್ಟನೆ
ಕಾಂಗ್ರೆಸ್ ಮನವಿಗೆ ಸ್ಪಂದಿಸಿರುವ ಕೇಂದ್ರ ಗೃಹ ಸಚಿವಾಲಯ, ಅಮೇಠಿ ಭೇಟಿಯ ವೇಳೆ ರಾಹುಲ್ ಮೇಲೆ ಓಡಾಡಿದ ಬೆಳಕಿನ ಚುಕ್ಕೆ ಸ್ನೆ„ಪರ್ ಗನ್‌ಗಳದ್ದಲ್ಲ, ಅದು ವಿಡಿಯೋ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೊಬೈಲ್ ಫೋನ್‌ನಿಂದ ಬಂದದ್ದು ಎಂದು ಸ್ಪಷ್ಟನೆ ನೀಡಿದೆ. ಅಲ್ಲದೆ, ಯಾವುದೇ ಭದ್ರತಾ ಲೋಪ ಆಗಿಲ್ಲ ಎಂದಿದೆ.