Advertisement

ರಾಹುಲ್‌ ದುಬಾರಿ ಜಾಕೆಟ್‌ ವಿವಾದ

06:00 AM Feb 01, 2018 | Harsha Rao |

ಶಿಲ್ಲಾಂಗ್‌/ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹತ್ತು ಲಕ್ಷ ರೂ. ವೆಚ್ಚದ ಸೂಟ್‌ ಧರಿಸಿದ್ದಾರೆ ಎಂದು ಆರೋಪ ಮಾಡಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ದುಬಾರಿ ಜಾಕೆಟ್‌ ಧರಿಸಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ. ಈ ಬೆಳವಣಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ.

Advertisement

ಮುಂದಿನ ತಿಂಗಳ 27ರಂದು ನಡೆಯಲಿರುವ ಮೇಘಾಲಯ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ರಾಹುಲ್‌ ಗಾಂಧಿ ಈಶಾನ್ಯ ರಾಜ್ಯ ಪ್ರವಾಸದಲ್ಲಿದ್ದಾರೆ. ಸೋಮವಾರ ಸಂಜೆ ಶಿಲ್ಲಾಂಗ್‌ನಲ್ಲಿ ಯುವ ಜನರು ಸೇರಿದ್ದ ರಾಕ್‌ ಸಂಗೀತ ಕಾರ್ಯಕ್ರಮಕ್ಕೆ ಕಪ್ಪುಬಣ್ಣದ ಜಾಕೆಟ್‌ ಧರಿಸಿ ರಾಹುಲ್‌ ತೆರಳಿದ್ದರು. ಅದರ ಮೌಲ್ಯ 63 ಸಾವಿರ ರೂ. ಎಂದು ಮೇಘಾಲಯ ಬಿಜೆಪಿ ಟೀಕಿಸಿದೆ. 15 ವರ್ಷಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್‌ ನೇತೃತ್ವದ ಸರಕಾರ ವ್ಯಾಪಕ ಭ್ರಷ್ಟಾಚಾರ ನಡೆಸಿದೆ.

ಅದರಿಂದ ಪಡೆದುಕೊಂಡ ಮೊತ್ತದಲ್ಲಿಯೇ ಜಾಕೆಟ್‌ ಖರೀದಿಸಲಾಯಿತೇ ಎಂದು ಮೇಘಾಯಲದ ಬಿಜೆಪಿ ಘಟಕ ಟ್ವೀಟ್‌ ಮಾಡಿದೆ. ಜತೆಗೆ ರಾಹುಲ್‌ ಇದ್ದ ಫೋಟೋವನ್ನೂ ಅಪ್‌ಲೋಡ್‌ ಮಾಡಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಬದಲು ನಿಮ್ಮ ನೇತೃತ್ವದ ಸರಕಾರದ ಭ್ರಷ್ಟಾಚಾರದ ಬಗ್ಗೆ ವಿವರಣೆ ನೀಡಬಹುದಿತ್ತು ಎಂದು ಲೇವಡಿ ಮಾಡಿದೆ. 

ಕಾಂಗ್ರೆಸ್‌ ಟೀಕೆ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಉದ್ಯಮಪತಿಗಳ ಪರ ಇದೆ (ಸೂಟ್‌ ಬೂಟ್‌ ಕಿ ಸರ್ಕಾರ್‌). ಅದಕ್ಕೆ ಕಾಂಗ್ರೆಸ್‌ ಅಧ್ಯಕ್ಷರನ್ನು ಪ್ರಶ್ನಿಸುವ ನೈತಿಕತೆಯೇ ಇಲ್ಲ ಎಂದು ಕೇಂದ್ರದ ಮಾಜಿ ಸಚಿವೆ ರೇಣುಕಾ ಚೌಧರಿ ಆರೋಪಿಸಿದ್ದಾರೆ.  ರಾಹುಲ್‌ಗೆ ಹೆಚ್ಚುವ ಜನಪ್ರಿಯತೆ ಕಂಡು ಬಿಜೆಪಿಗೆ ಭೀತಿ ಉಂಟಾಗಿದೆ ಎಂದಿದ್ದಾರೆ. 

ಅದು ಉಡುಗೊರೆ: ಜಾಕೆಟ್‌ ಧರಿಸಿ ವಿವಾದಕ್ಕೆ ಒಳಗಾಗಿರುವ ರಾಹುಲ್‌ ಗಾಂಧಿ ಬುಧವಾರ  ಸ್ಪಷ್ಟನೆ ನೀಡಿದ್ದಾರೆ. “ಶಿಲ್ಲಾಂಗ್‌ನಲ್ಲಿರುವ ನನ್ನ ಆಪ್ತರು  ಉಡುಗೊರೆಯಾಗಿ ನೀಡಿರುವ ಜಾಕೆಟ್‌ ಅದು’ ಎಂದು ಹೇಳಿದ್ದಾರೆ. ಜತೆಗೆ ಪ್ರಧಾನಿ ಮೋದಿ ವಿರುದ್ಧವೂ ಹರಿಹಾಯ್ದ ರಾಹುಲ್‌ ಗಾಂಧಿ “ಪ್ರಧಾನಿ ಒಬಾಮಾರಂಥ ವ್ಯಕ್ತಿಗಳು, ಶ್ರೀಮಂತರನ್ನು ಮಾತ್ರ ಆಲಿಂಗಿಸಿಕೊಳ್ಳುತ್ತಾರೆ. ಅವರು ಬಡವರನ್ನು ಆಲಿಂಗಿಸಿಕೊಂಡ ಉದಾಹರಣೆಯೇ ಇಲ್ಲ’ ಎಂದು ಹೇಳಿದ್ದಾರೆ. ಅವರು ಈಗಲೂ ಸೂಟ್‌ ಬೂಟ್‌ ವ್ಯಕ್ತಿ. ಅದರಲ್ಲೇನೂ ಬದಲಾವಣೆ ಆಗಿಲ್ಲ ಎಂದಿದ್ದಾರೆ.

Advertisement

ಏನಿದು ಸೂಟ್‌ ಬೂಟ್‌ ಕಿ ವಿವಾದ?: ಬರಾಕ್‌ ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದ ವೇಳೆ 2015ರಲ್ಲಿ ಗಣರಾಜ್ಯ ದಿನದ ಮುಖ್ಯ ಅತಿಥಿಯಾಗಿದ್ದರು. ಒಬಾಮ ಗೌರವಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹತ್ತು ಲಕ್ಷ ರೂ. ವೆಚ್ಚದ ಸೂಟ್‌ ಧರಿಸಿದ್ದರು ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಮಾತ್ರವಲ್ಲದೆ ಆಗ ಕಾಂಗ್ರೆಸ್‌ ಉಪಾಧ್ಯಕ್ಷರಾಗಿದ್ದ ರಾಹುಲ್‌ ಲೋಕಸಭೆಯಲ್ಲಿ ಮೋದಿಯವರನ್ನು “ಸೂಟ್‌ ಬೂಟ್‌ ಕಿ ಸರಕಾರ್‌’ ಎಂದು ಟೀಕಿಸಿದ್ದರು. ಈ ಮಾತು ಭಾರಿ ಕೋಲಾಹಲ ಸೃಷ್ಟಿಸಿತ್ತು. ಅಂತಿಮವಾಗಿ ಈ ಸೂಟ್‌ ಅನ್ನು ಸೂರತ್‌ ಉದ್ಯಮಿಯೊಬ್ಬರು 4.3 ಕೋಟಿ ರೂ.ಗೆ ಖರೀದಿಸಿದ್ದರು. 

ಮಹಾತ್ಮ ಬಳಿ ಮಹಿಳೆಯರು; ಭಾಗವತ್‌ ಸುತ್ತ ಪುರುಷರು
ಆರ್‌ಎಸ್‌ಎಸ್‌ನಲ್ಲಿ ಮಹಿಳೆಯರಿಗೆ ಗೌರವ ಇಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ಆರೋಪಿಸಿದ್ದಾರೆ. ಸಂಘಟನೆಯಲ್ಲಿ ಯಾವುದೇ ರೀತಿಯಲ್ಲಿ ಪ್ರಮುಖ ಪಾತ್ರಗಳನ್ನು ನೀಡಲಾಗುತ್ತಿಲ್ಲ. ಇದುವರೆಗೆ ಎಷ್ಟು ಮಂದಿಗೆ ನಾಯಕತ್ವದ ಪಾತ್ರ ನೀಡಲಾಗಿದೆ ಎಂದು ಪ್ರಶ್ನಿಸಿದ್ದಾರೆ. “ಮಹಾತ್ಮ ಗಾಂಧೀಜಿಯವರ ಚಿತ್ರ ನೋಡಿ ಆರ್‌ಎಸ್‌ಎಸ್‌ ನಾಯಕರು ಕಲಿತುಕೊಳ್ಳಬೇಕು. ಅವರು ಇಬ್ಬರು ಮಹಿಳೆಯರನ್ನು ತಮ್ಮ ಎಡ ಬಲಗಳಲ್ಲಿ ಹಿಡಿದುಕೊಂಡು ನಡೆಯುತ್ತಿದ್ದರು. ಸದ್ಯದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಆ ರೀತಿ ನಡೆದುಕೊಂಡಿದ್ದಾರೆಯೇ? ಕೆಲವೊಮ್ಮೆ ಅವರು ಒಬ್ಬರೇ ನಡೆಯುತ್ತಾರೆ ಅಥವಾ ಪುರುಷರ ಜತೆ ನಡೆಯುತ್ತಾರೆ. ಮಹಿಳೆಯರೊಡ ಗೂಡಿ ನಡೆದದ್ದೇ ಇಲ್ಲ’ ಎಂದು ಟೀಕಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next