Advertisement
ರಾಹುಲ್ ಗಾಂಧಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ ನಂತರ ಅವರನ್ನೇ ಮುಂದುವರಿಸಲು ಪಕ್ಷದ ಎಲ್ಲ ಹಂತದ ನಾಯಕರು ನಿರಂತರ ಕಸರತ್ತು ನಡೆಸಿದ್ದರು. ಆದರೆ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಕಾರಣ ಅನಿವಾರ್ಯವಾಗಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನೇ ಮಧ್ಯಂತರ ಅವ ಧಿಗೆ ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
Related Articles
Advertisement
ಬಿಜೆಪಿ ನಿರ್ಧಾರಗಳ ಬಗ್ಗೆ ವಿರೋಧ: ಕೇಂದ್ರದಲ್ಲಿ ಬಿಜೆಪಿ 2ನೇ ಅವಧಿಗೆ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ವಿವಾದಾತ್ಮಕ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಿದ್ದು, ಕೇಂದ್ರ ಸರ್ಕಾರದ ನಡೆ ಬಗ್ಗೆ ದೇಶದಲ್ಲಿ ಸಾರ್ವಜನಿಕವಾಗಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸಿದಾಗ ದೇಶದ ಬಹುತೇಕ ಜನರು ಕೇಂದ್ರ ಸರ್ಕಾರದ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಆದರೆ, ಕಾಂಗ್ರೆಸ್ ಮತ್ತು ಕೆಲವು ವಿರೋಧ ಪಕ್ಷಗಳು ಅದನ್ನು ವಿರೋಧಿಸಿದ್ದವು. ದೇಶದ ಬಹುಪಾಲು ಜನರ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಎನ್‌ಆರ್‌ಸಿ ಹಾಗೂ ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವ ನಿರ್ಧಾರ ಕೈಗೊಂಡಿತು. ಪಕ್ಕದ ಮೂರು ರಾಷ್ಟ್ರಗಳಿಂದ ನಿರಾಶ್ರಿತರಾಗಿ ವಲಸೆ ಬಂದಿರುವವರಿಗೆ ಭಾರತೀಯ ಪೌರತ್ವ ನೀಡುವ ವಿಷಯದಲ್ಲಿ ಧರ್ಮಗಳ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂದು ದೇಶದ ಸಾಮಾನ್ಯ ಜನರು ಬೀದಿಗಿಳಿದು ಹೋರಾಟ ಆರಂಭಿಸಿದರು.
ಈ ವಿಷಯದಲ್ಲಿ ಕಾಂಗ್ರೆಸ್ ಆರಂಭದಲ್ಲಿ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿತು. ಆದರೆ, ಜನರೇ ನೇರವಾಗಿ ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿರುವಾಗ ಪ್ರಮುಖ ಪ್ರತಿಪಕ್ಷ ಬೆಂಬಲವಾಗಿ ನಿಲ್ಲದೇ ಹೋದರೆ ಜನರ ವಿಶ್ವಾಸ ಗಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂಬ ಅಭಿಪ್ರಾಯ ಕಾಂಗ್ರೆಸ್‌ನಲ್ಲಿ ವ್ಯಕ್ತವಾಗಿದೆ. ಆದರೆ, ದೇಶಾದ್ಯಂತ ಜನರ ಭಾವನೆಗಳಿಗೆ ಸ್ಪಂದಿಸಿ ಅವರೊಂದಿಗೆ ಬೀದಿಗಿಳಿದು ಹೋರಾಟ ಮಾಡಲು ನಾಯಕತ್ವದ ಅಗತ್ಯವಿದೆ.
ಆದರೆ, ಸೋನಿಯಾ ಗಾಂಧಿಯವರಿಗೆ ಆರೋಗ್ಯದ ಸಮಸ್ಯೆಯಿಂದ ದೇಶಾದ್ಯಂತ ಪ್ರವಾಸ ಮಾಡುವುದು ಕಷ್ಟವಾಗಿರುವುದರಿಂದ ರಾಹುಲ್ ಮತ್ತೆ ಪಕ್ಷದ ನಾಯಕತ್ವ ವಹಿಸಿಕೊಂಡು ದೇಶಾದ್ಯಂತ ಬಿಜೆಪಿ ವಿರುದ್ಧ ಹೋರಾಟ ನಡೆಸಿದರೆ ಪಕ್ಷಕ್ಕೆ ಶಕ್ತಿ ಹೆಚ್ಚುವುದಲ್ಲದೆ ಕೇಂದ್ರದ ವಿರುದ್ಧ ಜನಾಂದೋಲನ ರೂಪಿಸಲು ಸಾಧ್ಯವಾಗುತ್ತದೆಂಬ ಕಾರಣಕ್ಕೆ ಅವರನ್ನು ಮತ್ತೆ ಅಧ್ಯಕ್ಷ ಗಾದಿಯಲ್ಲಿ ಕೂರಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.
ಯುವ ನಾಯಕರ ಒತ್ತಡ: ಸೋನಿಯಾ ಗಾಂಧಿಯವರು ಮಧ್ಯಂತರ ಅವಧಿಗೆ ಅಧ್ಯಕ್ಷರಾಗಿದ್ದರೂ, ಬಹುತೇಕ ನಾಯಕರು ದೆಹಲಿಗೆ ಭೇಟಿ ನೀಡಿದಾಗ ರಾಹುಲ್ ಗಾಂಧಿಯವರನ್ನೂ ಭೇಟಿಯಾಗಿ ತಮ್ಮ ಬೇಡಿಕೆ ಸಲ್ಲಿಸುವ ಪರಿಪಾಠ ಮುಂದು ವರಿಸಿದ್ದಾರೆ. ಕೆಲ ನಾಯಕರು ಸೋನಿಯಾ ಗಾಂಧಿಯವರ ಬಳಿ ತಮ್ಮ ಬೇಡಿಕೆಗೆ ಮಾನ್ಯತೆ ದೊರೆಯದಿದ್ದಾಗ ರಾಹುಲ್ ಮೂಲಕ ಸೋನಿಯಾ ಮನವೊಲಿಕೆ ಕಸರತ್ತು ನಡೆಸಿದ್ದಾರೆ.
ಬಹುತೇಕ ಯುವ ನಾಯಕರು ಭವಿಷ್ಯದ ದೃಷ್ಟಿಯಿಂದ ರಾಹುಲ್‌ಗೆ ಈಗಲೇ ಅಧಿಕಾರ ನೀಡಿದರೆ, ಸಾರ್ವತ್ರಿಕ ಚುನಾವಣೆ ಹೊತ್ತಿಗೆ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು ಸಾಧ್ಯ ವಾಗುತ್ತದೆ ಎಂಬ ಅಭಿಪ್ರಾಯ ಹೊಂದಿದ್ದು, ಅವರಿಗೆ ಜವಾಬ್ದಾರಿ ನೀಡುವಂತೆ ಸೋನಿಯಾ ಗಾಂಧಿಗೆ ಮನವಿ ಮಾಡಿಕೊಳ್ಳುವುದರ ಜತೆಗೆ ಜವಾಬ್ದಾರಿ ವಹಿಸಿಕೊಳ್ಳುವಂತೆ ರಾಹುಲ್‌ಗೂ ಒತ್ತಡ ಹೇರುತ್ತಿದ್ದಾರೆಂದು ತಿಳಿದು ಬಂದಿದೆ.
* ಶಂಕರ ಪಾಗೋಜಿ