Advertisement

ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

08:44 PM Oct 18, 2021 | Team Udayavani |

ಕಲಬುರಗಿ: ಎಐಸಿಸಿ ನೇತೃತ್ವವನ್ನು ರಾಹುಲ್‌ ಗಾಂಧಿ ವಹಿಸಿಕೊಳ್ಳುವಂತೆ ಇತ್ತೀಚೆಗೆ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

Advertisement

ತಕ್ಷಣವೇ ಇದನ್ನು ಒಪ್ಪಿಕೊಳ್ಳುವಂತೆ ಎಲ್ಲರೂ ಮನವಿ ಮಾಡಿದ್ದೇವೆ ಎಂದು ಕೇಂದ್ರದ ಮಾಜಿ ಸಚಿವ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ನಾಯಕತ್ವವನ್ನು ರಾಹುಲ್‌ ಗಾಂಧಿ ವಹಿಸಿಕೊಳ್ಳುವುದರ ಜತೆಗೆ ಎಐಸಿಸಿ ಅಧ್ಯಕ್ಷರೆಂದು ಒಪ್ಪಿಕೊಳ್ಳಬೇಕೆಂದು ನಿರ್ಣಯಿಸಲಾಗಿದೆ. ಈ ಬಗ್ಗೆ ಆಲೋಚನೆ ಮಾಡುತ್ತೇನೆಂದು ರಾಹುಲ್‌ ಕೂಡ ಹೇಳಿದ್ದಾರೆ. ಅಲ್ಲದೇ, ಈಗಾಗಲೇ ಪಕ್ಷಕ್ಕಾಗಿ ಶ್ರಮಿಸುತ್ತಿದ್ದೇನೆ. ಮುಂದೆಯೂ ಶ್ರಮಿಸಲಿದ್ದೇನೆಂದೂ ರಾಹುಲ್‌ ಹೇಳಿದ್ದಾರೆ ಎಂದರು.

ತೈಲ ಬೆಲೆ ಏರಿಕೆ, ಕರಾಳ ಕೃಷಿ ಕಾಯ್ದೆಗಳು, ನಿರುದ್ಯೋಗ ಹೆಚ್ಚಳ, ಉತ್ತರ ಪ್ರದೇಶದ ಲಖೀಂಪುರದ ಘಟನೆ ಸಂಬಂಧ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಕುಮಾರ ಮಿಶ್ರಾ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ವ್ಯವಸ್ಥಿತವಾದ ದಬ್ಟಾಳಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ:ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

Advertisement

ಅಲ್ಪಸಂಖ್ಯಾತ ಅಭ್ಯರ್ಥಿಯಿಂದ ಹಿನ್ನಡೆ ಆಗಲ್ಲ
ಹಾನಗಲ್ಲ ಹಾಗೂ ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ಕಾಂಗ್ರೆಸ್‌ಗೆ ಯಾವುದೇ ರೀತಿಯ ಹಿನ್ನಡೆಯಾಗಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದರೆ ಕಾಂಗ್ರೆಸ್‌ಗೆ ಹಿನ್ನಡೆ ಎಂದು ತಿಳಿದುಕೊಂಡರೆ ಅದು ತಪ್ಪು ಕಲ್ಪನೆ. ಜನ ಈಗ ಜಾಗೃತರಾಗಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಎಐಎಂಐಎಂ ಪಕ್ಷ ತನ್ನ ಅಭ್ಯರ್ಥಿಗಳನ್ನು ಹಾಕಿತ್ತು. ಆದರೆ, ಜನತೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಕೈಬಿಟ್ಟಿಲ್ಲ. ಕಾಂಗ್ರೆಸ್‌ ಜಾತ್ಯತೀತ ತತ್ವದ ಮೇಲೆ ನಡೆಯುವ ಪಕ್ಷ. ಆದ್ದರಿಂದ ಈ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜನ ಕಾಂಗ್ರೆಸ್‌ಗೆ ಆಶೀರ್ವಾದ ಮಾಡುತ್ತಾರೆಂದು ಖರ್ಗೆ ಹೇಳಿದರು.

ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ದಿನದಿಂದ ದಿನಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ಇದು ಶ್ರೀಮಂತರಿಗೆ ಸಮಸ್ಯೆಯಾಗದೇ ಇರಬಹುದು. ಜನಸಾಮಾನ್ಯರಿಗಂತೂ ಹೊರೆಯಾಗಿದೆ. ಬೆಲೆ ಹೆಚ್ಚಳವಾದರೂ ಪೆಟ್ರೋಲ್‌ ಹಾಕಿಸಿಕೊಳ್ಳುತ್ತೇವೆ ಎನ್ನುವವರು ವಿಕೃತ ಮನಸ್ಸಿನವರು. ಕಾಂಗ್ರೆಸ್‌ ಕಾಲದಲ್ಲಿ ಕಚ್ಚಾ ತೈಲ ಬೆಲೆ ಒಂದು ಬ್ಯಾರೆಲ್‌ಗೆ 130 ಡಾಲರ್‌ ಇದ್ದರೂ ಜನರ ಮೇಲೆ ಹೊರೆಯಾಗದಂತೆ ಪ್ರತಿ ಲೀಟರ್‌ಗೆ 60 ರೂ.ಗೆ ನೀಡಲಾಗುತ್ತಿತ್ತು. ಆದರೆ, ಈಗ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ ಕೇಂದ್ರ ಸರ್ಕಾರ ನಿರಂತರವಾಗಿ ತೆರಿಗೆ ಹಾಕುತ್ತಲೇ ಇದೆ. ರಾಜ್ಯ ಸರ್ಕಾರಗಳು ಸಹ ತೆರಿಗೆ ಹೆಚ್ಚಿಸುತ್ತಲೇ ಇವೆ. ಇದರಿಂದ ಇಂದು ಪೆಟ್ರೋಲ್‌ ಬೆಲೆ 109 ರೂ. ಮತ್ತು ಡೀಸೆಲ್‌ 100 ರೂ. ಗಡಿ ದಾಟಿದೆ. ದೇಶದ ಜನತೆಗೆ ಬಹಳ ದೊಡ್ಡ ಹೊಡೆತವನ್ನು ಪ್ರಧಾನಿ ಮೋದಿ ಕೊಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next