Advertisement

ಬಳ್ಳಾರಿ ಜಿಲ್ಲೆಯ ಸ್ವಾಮೀಜಿಗಳ ಜತೆ ರಾಹುಲ್‌ ಚರ್ಚೆ?

06:05 AM Feb 10, 2018 | |

ಬೆಂಗಳೂರು/ಬಳ್ಳಾರಿ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷಗಳ ತಯಾರಿ ಜೋರಾಗಿದೆ. ರಾಜ್ಯ ಮತದಾರರ ಓಲೈಕೆಗೆ ವಿವಿಧ ಪಕ್ಷಗಳ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಆಗಮಿಸುತ್ತಿದ್ದು, ವಿವಿಧ ಜನಾಂಗದ, ವಿವಿಧ ವರ್ಗಗಳ ಜನರ ಓಲೈಕೆಗೆ ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿಯವರು ತಮ್ಮ ಮೊದಲ ರಾಜ್ಯ ಪ್ರವಾಸದಲ್ಲೇ ಮಠಾಧೀಶರನ್ನು ಭೇಟಿ ಮಾಡಿ, ಅವರೊಂದಿಗೆ ಚರ್ಚಿಸಲಿದ್ದಾರೆ.

Advertisement

ಕಾಂಗ್ರೆಸ್‌ ನಿಮ್ಮೊಂದಿಗೆ ಇದೆ ಎಂಬ ಸಂದೇಶ ನೀಡಲು ಬಯಸಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ
ಜಿಲ್ಲೆಯಲ್ಲಿ ಪ್ರಬಲವಾಗಿರುವ ಮಠಾಧೀಶರ ಪರಿಷತ್‌ನ ಪ್ರಮುಖ ಸ್ವಾಮೀಜಿಗಳ ನಡುವೆ ಗುಪ್ತ ಸಭೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ವೀರಶೈವ ಲಿಂಗಾಯತವೂ ಒಂದಾಗಿದೆ. ಇದನ್ನು ಸೆಳೆಯಲು ಕಾಂಗ್ರೆಸ್‌ ಬಳ್ಳಾರಿಯಿಂದಲೇ ತನ್ನ ಕಾರ್ಯತಂತ್ರ ರೂಪಿಸಿದೆ. ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಈ ಕಾರ್ಯ ತಂತ್ರದ ಹೊಣೆ ಹೊತ್ತಿದ್ದು, ಸಮಾಲೋಚನೆಗೆ ಸಿಎಂ ಸಿದ್ದರಾಮಯ್ಯ ಅವರ ಸಮ್ಮತಿ ಪಡೆದಿದ್ದಾರೆ. ರಾಹುಲ್‌ ಭೇಟಿ ವೇಳೆ ಅವರನ್ನು ಸ್ವಾಮೀಜಿಗಳಿಗೆ ಭೇಟಿ ಮಾಡಿಸಿ, ಅವರ ಜೊತೆ ಸಮಾಲೋಚನೆ ನಡೆಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಸಮಯ ಮತ್ತು ಸ್ಥಳವನ್ನು ನಿಗದಿ ಮಾಡುವ ವಿಚಾರವನ್ನು ಮಠಾಧೀಶರ ಪರಿಷತ್‌ನ ಸ್ವಾಮೀಜಿಗಳಿಗೆ ಬಿಟ್ಟಿದ್ದಾರೆ ಎನ್ನಲಾಗಿದೆ. 

ಈ ಎಲ್ಲಾ ಬೆಳವಣಿಗೆಗಳು  ಈವರೆಗೂ ಗುಪ್ತವಾಗಿಯೇ ನಡೆದಿವೆ. ಅಲ್ಲದೆ, ಈ ಬಗ್ಗೆ ಅಂತಿಮ ತೀರ್ಮಾನವನ್ನು ಪರಿಷತ್‌ ಈವರೆಗೂ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಮಠಾಧೀಶರ ಪರಿಷತ್‌ನಲ್ಲಿ ಜಿಲ್ಲೆಯ 59 ಮಠಾಧೀಶರು ಇದ್ದು, ಇದಕ್ಕೆ ಕಾರ್ಯದರ್ಶಿಗಳಾಗಿ ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಸ್ವಾಮೀಜಿ ಇದ್ದಾರೆ. ಪರಿಷತ್‌ ಸಮಾಜಮುಖೀ ಹೋರಾಟಗಳಲ್ಲಿ ತೊಡಗಿಸಿಕೊಂಡಿದೆ.

Advertisement

ನಾವು ಯಾವುದೇ ರಾಜಕಾರಣಿಗಳ ಬಳಿಗೆ ಹೋಗುವುದಿಲ್ಲ. ಇನ್ನು, ಅವರಾಗೇ ನಮ್ಮ ಬಳಿ ಬಂದರೆ ಅವರನ್ನು ಸ್ವಾಗತಿಸಿ,
ಮಾತನಾಡಿಸುತ್ತೇವೆ. ಸಚಿವ ಸಂತೋಷ್‌ ಲಾಡ್‌ ಅವರು ಈ ವಿಷಯವಾಗಿ ನಮ್ಮನ್ನು ಸಂಪರ್ಕಿಸಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು.

– ಕಲ್ಯಾಣ ಶ್ರೀಗಳು, ಮಠಾಧೀಶರ ಧರ್ಮ ಪರಿಷತ್‌ನ ಕಾರ್ಯದರ್ಶಿ, ಬಳ್ಳಾರಿ.

Advertisement

Udayavani is now on Telegram. Click here to join our channel and stay updated with the latest news.

Next