Advertisement

“ಹಾದಿ-ಬೀದಿ ರಂಪಾಟ ಬಿಡಿ’

12:30 AM Feb 01, 2019 | |

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಹಾದಿ ಬೀದಿಯಲ್ಲಿ ಪರಸ್ಪರ ಬೈದಾಡಿಕೊಂಡು ಅಪನಂಬಿಕೆ-ಅನುಮಾನಗಳ ನಡುವೆ ಒಟ್ಟಿಗೆ ಚುನಾವಣೆ ಎದುರಿಸಿದರೆ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ಸಮ್ಮಿಶ್ರ ಸರ್ಕಾರದ ಬಗ್ಗೆ ಸಮನ್ವಯ ಸಮಿತಿ ಸಭೆ ಬಿಟ್ಟು ಬೇರೆಲ್ಲೂ ಮಾತನಾಡುವುದು ಬೇಡ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಕಟ್ಟಪ್ಪಣೆ ನೀಡಿದ್ದಾರೆ.

Advertisement

ಕಾಂಗ್ರೆಸ್‌ ಶಾಸಕರು, ಸಚಿವರು ಹಾಗೂ ಮಾಜಿ ಸಚಿವರಿಂದ ಬಹಿರಂಗವಾಗಿ ವಿವಾದಾತ್ಮಕ ಹಾಗೂ ಗೊಂದಲಕಾರಿ ಹೇಳಿಕೆಗಳು ನೀಡದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ವಹಿಸಿದ್ದಾರೆ.

ಕಾಂಗ್ರೆಸ್‌ ಶಾಸಕರ ಅಸಮಾಧಾನ ಶಮನಗೊಳಿಸುವ ಸಂಬಂಧ ನಾನೇ ಖುದ್ದಾಗಿ ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ ಜತೆ ಮಾತನಾಡಲಿದ್ದೇನೆ. ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್‌ನಿಂದ ಕುತ್ತು ಬರಬಾರದು. ಆ ಅಪವಾದ ಬರಲು ಅವಕಾಶವೂ ಮಾಡಿಕೊಡಬಾರದೆಂದು ರಾಹುಲ್‌ಗಾಂಧಿ ಖಡಕ್‌ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ “ಜಪ’ ಮಾಡುತ್ತಿರುವ ಕಾಂಗ್ರೆಸ್‌ ಸಚಿವರು, ಶಾಸಕರು, ಮಾಜಿ ಸಚಿವರ ಹೇಳಿಕೆಗಳಿಂದ ಕಸಿವಿಸಿಗೊಂಡಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ಗೆ ” ಇನ್ಮುಂದೆ ನಾವು ಸಹಿಸಲು ಸಾಧ್ಯವಿಲ್ಲ’.

ಸಮ್ಮಿಶ್ರ ಸರ್ಕಾರದಲ್ಲಿ ಏಳು ತಿಂಗಳಿನಿಂದ ಕೆಲಸವೇ ಆಗುತ್ತಿಲ್ಲ ಎಂದು ಪಾಲುದಾರ ಪಕ್ಷದವರೇ ಹೇಳಿದರೆ ಜನರಿಗೆ ಯಾವ ಸಂದೇಶ ರವಾನೆಯಾಗುತ್ತದೆ. ಕಾಂಗ್ರೆಸ್‌ ನಾಯಕರೇ ಸರ್ಕಾರದ ಪತನಕ್ಕೆ ಒಳಸಂಚು ನಡೆಸುತ್ತಿದ್ದಾರೆ’ ಎಂದು ಖಾರವಾಗಿ ಹೇಳಿದ್ದರ ಪರಿಣಾಮವೇ ರಾಹುಲ್‌ ಗಾಂಧಿಯವರು ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಅವರನ್ನು ಕರೆದು ಮಾತನಾಡಿದ್ದಾರೆ.

ಈಗಿನ ಪರಿಸ್ಥಿತಿ ಮುಂದುವರಿದು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಿದರೆ ಹೆಚ್ಚು ಸೀಟು ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ, ನೀವಿಬ್ಬರೂ ಹೊಣೆಗಾರಿಕೆ ವಹಿಸಿಕೊಂಡು ವಿವಾದಾತ್ಮಕ ಹೇಳಿಕೆ ನೀಡುವವರನ್ನು ಸುಮ್ಮನಾಗಿಸಿ ಎಂದು ಸೂಚಿಸಿದ್ದಾರೆಂದು ತಿಳಿದು ಬಂದಿದೆ.

Advertisement

ಸಿದ್ದು ಅಸಮಾಧಾನ: ಜೆಡಿಎಸ್‌ ಬಗ್ಗೆಯೂ ಸಿದ್ದರಾಮಯ್ಯ ರಾಹುಲ್‌ಗಾಂಧಿಯವರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದು ಪ್ರತಿ ಸಣ್ಣ ವಿಚಾರವನ್ನೂ ದೊಡ್ಡದು ಮಾಡಲಾಗುತ್ತಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರ ಉತ್ತಮ ಆಡಳಿತ ನೀಡಿತ್ತು ಎಂದು ನಮ್ಮವರು ಹೇಳುವುದು ತಪ್ಪು ಎಂದರೆ ಹೇಗೆ? ಜೆಡಿಎಸ್‌ನ ಕೆಲ ಸಚಿವರೂ ಬಿಜೆಪಿ ಜತೆಯೇ ಸರ್ಕಾರ ಮಾಡಿದಾಗ ಚೆನ್ನಾಗಿತ್ತು? ನಾವೇನು ಕಾಂಗ್ರೆಸ್‌ ಮನೆ ಬಾಗಿಲಿಗೆ ಹೊಗಿದ್ದೆವಾ ಎಂದು ಪದೇಪದೆ ಹೇಳುತ್ತಿದ್ದಾರೆ. ಇದು ಕಾಂಗ್ರೆಸ್‌ ಶಾಸಕರ ಕೋಪಕ್ಕೆ ಕಾರಣವಾಗಿದೆ. ಜೆಡಿಎಸ್‌ ನಾಯಕರು ಇಂತಹ ಹೇಳಿಕೆಗಳಿಗೆ ಕಡಿವಾಣ ಹಾಕುತ್ತಿಲ್ಲ. ಬದಲಿಗೆ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್‌ ಆಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಈಗಿನ ಸ್ಥಿತಿನಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್‌ಗಿಂತ ಜೆಡಿಎಸ್‌ಗೆ ಲಾಭ ಎಂದು ರಾಹುಲ್‌ಗಾಂಧಿಯವರಿಗೆ ತಿಳಿಸಿದರು ಎಂದು ಹೇಳಲಾಗಿದೆ.

ಆದರೆ, ರಾಹುಲ್‌ಗಾಂಧಿಯವರು, ಸಮ್ಮಿಶ್ರ ಸರ್ಕಾರಕ್ಕೂ ಧಕ್ಕೆಯಾಗಬಾರದು. ಪಕ್ಷವೂ ಉಳಿಯಬೇಕು, ಸಂಘಟನೆಯೂ ಸತ್ವ ಕಳೆದುಕೊಳ್ಳಬಾರದು. ಸೂಕ್ಷ್ಮವಾಗಿ ಪರಿಸ್ಥಿತಿ ನಿಭಾಯಿಸಿ ಎಂದು ಕಿವಿಮಾತು ಹೇಳಿ ಕಳುಹಿಸಿದರು ಎಂದು ತಿಳಿದು ಬಂದಿದೆ.

ಇಬ್ಬರು ಮಾತ್ರ ಯಾಕೆ?
ಈ ಮಧ್ಯೆ, ರಾಹುಲ್‌ಗಾಂಧಿಯವರು ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಅವರನ್ನು ಮಾತ್ರ ದೆಹಲಿಗೆ ಕರೆಸಿಕೊಂಡು ಮಾತನಾಡಿದ್ದು ಯಾಕೆ? ಡಾ.ಜಿ.ಪರಮೇಶ್ವರ್‌,ಈಶ್ವರ್‌ ಖಂಡ್ರೆ ಅವರನ್ನು ಯಾಕೆ ಆಹ್ವಾನಿಸಿಲ್ಲ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿವೆ.

ಆದರೆ, ಇದು ಪೂರ್ವ ನಿಯೋಜಿತ ಅಲ್ಲ. ಜಾರ್ಜ್‌ ಫೆರ್ನಾಂಡಿಸ್‌ ಅವರಿಗೆ ನಮನ ಸಲ್ಲಿಸಲು ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದರು. ದಿನೇಶ್‌ ಗುಂಡೂರಾವ್‌ ಸಹ ತೆರಳಿದ್ದರು. ಆಗ ಸಿದ್ದರಾಮಯ್ಯ ಅವರೇ ರಾಹುಲ್‌ಗಾಂಧಿ ಭೇಟಿಗೆ ಅವಕಾಶ ಕೋರಿದರು. ಹೀಗಾಗಿ, ಭೇಟಿಯಾಗಿದೆ ಎಂಬ ಸಮಜಾಯಿಷಿ ಸಹ ನೀಡಲಾಗುತ್ತಿದೆ.

– ಎಸ್‌.ಲಕ್ಷ್ಮಿ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next