ಝರ್ಸುಗುಡ/ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಇತರೆ ಹಿಂದುಳಿದ ವರ್ಗ ದಲ್ಲಿ (ಒಬಿಸಿ) ಹುಟ್ಟಿಲ್ಲ, ಅವರು ತಮ್ಮ ಜಾತಿಯ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಭಾರತ್ ಜೋಡೋ ನ್ಯಾಯಯಾತ್ರೆಯಲ್ಲಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಹುಲ್ ವಿರುದ್ಧ ದಾಳಿ ನಡೆಸಿರುವ ಕೇಂದ್ರ ಸರಕಾರ, ಮೋದಿಯವರ ಮೋಧ್ ಘಾಂಚಿ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ, ಅಧಿಸೂಚನೆ ಹೊರಡಿಸಿದ್ದೇ ಅಂದು ಗುಜರಾತ್‌ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಎಂದು ಹೇಳಿದೆ.
ಗುರುವಾರ ಎರಡೂ ಪಕ್ಷಗಳ ನಡುವೆ ದೇಶದ ಪ್ರಧಾನಿಯ ಜಾತಿ ಯಾವುದೆ ನ್ನುವು ದರ ಕುರಿತು ಪರಸ್ಪರ ವಾಗ್ವಾದ ನಡೆದಿದೆ. ನ್ಯಾಯಯಾತ್ರೆಯಲ್ಲಿ ಮೋದಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ರಾಹುಲ್, ಮೋದಿಯ ಜಾತಿಯನ್ನೇ ಆಧರಿಸಿ ಹರಿಹಾಯ್ದರು.
ರಾಹುಲ್ ಹೇಳಿದ್ದೇನು?: ಒಡಿಶಾದ ಝರ್ಸುಗುಡದಲ್ಲಿ ನಡೆದ ನ್ಯಾಯ ಯಾತ್ರೆಯಲ್ಲಿ ಮಾತನಾಡಿದ ರಾಹುಲ್, ಮೋದಿ ಅವರು ಹಿಂದುಳಿದ ವರ್ಗದಲ್ಲಿ ಹುಟ್ಟ ಲಿಲ್ಲ, ಜನ್ಮತಃ ಅವರು ಸಾಮಾನ್ಯ ವರ್ಗಕ್ಕೆ ಸೇರಿದ್ದಾರೆ. ಅವರ ಘಾಂಚಿ ಸಮುದಾಯಕ್ಕೆ 2000ರಲ್ಲಿ ಬಿಜೆಪಿ ಸರಕಾರ ಒಬಿಸಿ ಸ್ಥಾನಮಾನ ನೀಡಿತು. ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ ತಮ್ಮ ಜಾತಿಯನ್ನು ಒಬಿಸಿಗೆ ಬದಲಿಸಿಕೊಂಡರು ಎಂದು ರಾಹುಲ್ ಆರೋಪಿಸಿದರು. ಆರಂಭದಲ್ಲಿ ಮೋದಿ ಜಾತಿಯನ್ನು ತೆಲಿ ಎಂದು ರಾಹುಲ್ ಹೇಳಿದರೂ, ನಂತರ ಅದನ್ನು ಬದಲಿಸಿ ಘಾಂಚಿ ಎಂದು ಸರಿಮಾಡಿಕೊಂಡರು.
“ಬಿಜೆಪಿ ಮತ್ತು ನರೇಂದ್ರ ಮೋದಿಗೆ ಜಾತಿಗಣತಿ ಬಗ್ಗೆ ಆಸಕ್ತಿ ಇಲ್ಲ. ಮೋದಿ ತಮ್ಮ ಜೀವನಪರ್ಯಂತ ಜಾತಿಗಣತಿಗೆ ಅವಕಾ ಶವನ್ನೇ ನೀಡುವುದಿಲ್ಲ. ಏಕೆಂದರೆ ಅವರು ಒಬಿಸಿಯೇ ಅಲ್ಲ” ಎಂದು ಹರಿಹಾಯ್ದರು. “ಭಾರತ್ ಜೋಡೋ ಯಾತ್ರೆಯಲ್ಲಿ ಜಾತಿಗಣತಿ ಬಗ್ಗೆ ಏಕೆ ಪ್ರಸ್ತಾಪಿಸುತ್ತಿದ್ದೀರಿ ಎಂದು ವರದಿಗಾರರೊಬ್ಬರು ಪ್ರಶ್ನೆ ಕೇಳಿದ್ದರು. ದೇಶದಲ್ಲಿ ಎಷ್ಟು ಮಂದಿ ಆದಿವಾಸಿಗಳು ಇದ್ದಾರೆ ಎಂದು ನಿಮಗೆ ತಿಳಿದಿದೆಯೇ ಎಂದು ನಾನು ಕೇಳಿದೆ. ಶೇ.8ರಷ್ಟು ಆದಿವಾಸಿಗಳು, ಶೇ. 15ರಷ್ಟು ದಲಿತರು ಹಾಗೂ ಶೇ.55ರಷ್ಟು ಮಂದಿ ಹಿಂದುಳಿದ ವರ್ಗದವರು ಇದ್ದಾರೆ. ಆದರೆ ನಿಮ್ಮ ಸುತ್ತಮುತ್ತ ಎಷ್ಟು ಮಂದಿ ಇದ್ದಾರೆ ಎಂದು ನೋಡಿಕೊಳ್ಳಿ’ ಎಂದು ಮಾಧ್ಯಮದವರನ್ನು ಕೇಳಿದೆ ಎಂದರು.
“ದೇಶದ ಅಗ್ರ 200 ಕಂಪೆನಿಗಳಲ್ಲಿ ಎಷ್ಟು ದಲಿತರು ಇದ್ದಾರೆ? ಕಂಪೆನಿಗಳು ಹೋಗಲಿ, ಸರಕಾರದ ಉನ್ನತ ಹುದ್ದೆಗಳಲ್ಲಿ ಎಷ್ಟು ಮಂದಿ ದಲಿತರಿದ್ದಾರೆ’ ಎಂದು ಪ್ರಶ್ನಿಸಿದರು.
“1994ರಲ್ಲೇ ಗುಜರಾತ್‌ಸರಕಾರದ ಅಧಿಸೂಚನೆ”
ಮೋದಿ ಜಾತಿಯ ಕುರಿತ ರಾಹುಲ್ ವಾಗ್ಧಾಳಿಗೆ ಕೇಂದ್ರ ಸರಕಾರ ಉತ್ತರ ನೀಡಿದೆ. ಮೋಧ್ ಘಾಂಚಿಯನ್ನು ಒಬಿಸಿಗೆ ಸೇರಿಸಿದ್ದು ಅಂದಿನ ಗುಜರಾತ್ ಕಾಂಗ್ರೆಸ್ ಸರಕಾರವೇ ಹೊರತು ಬಿಜೆಪಿಯಲ್ಲ ಎಂದು ಸ್ಪಷ್ಟಪಡಿಸಿದೆ.
“ಮೋಧ್ ಘಾಂಚಿ” ಸಮುದಾಯ ಗುಜರಾತ್‌ನಲ್ಲಿ ಒಬಿಸಿ ಪಟ್ಟಿಯಲ್ಲಿದೆ. ಗುಜರಾತ್‌ನಲ್ಲಿ ಸಮೀಕ್ಷೆ ನಡೆಸಿದ ನಂತರ ಮಂಡಲ್ ಆಯೋಗ, 91(ಎ) ಸೂಚ್ಯಂಕದಡಿ ಒಬಿಸಿ ಸಮುದಾಯಗಳ ಪಟ್ಟಿ ಸಿದ್ಧ ಮಾಡಿತು. ಅದರಲ್ಲಿ ಮೋಧ್ ಘಾಂಚಿಯನ್ನು ಒಬಿಸಿಗೆ ಸೇರ್ಪಡೆ ಮಾಡಲಾಯಿತು. ಗುಜರಾತ್‌ನಲ್ಲಿನ 105 ಒಬಿಸಿ ಸಮುದಾಯಗಳ ಪಟ್ಟಿಯಲ್ಲೂ ಮೋಧ್ ಘಾಂಚಿ ಹೆಸರು ಇದೆ’ ಎಂದು ಕೇಂದ್ರ ಹೇಳಿದೆ.
“ಮೋಧ್ ಘಾಂಚಿ ಉಪಜಾತಿಯನ್ನು ಒಬಿಸಿಗೆ ಸೇರಿಸಲು, 1994 ಜು.25ರಂದು ಗುಜರಾತ್ ಸರಕಾರ ಅಧಿಸೂಚನೆ ಹೊರಡಿಸಿತು. ಆಗ ಅಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ಸರಕಾರ. ಅದೇ ಸಮುದಾಯವನ್ನು ಒಬಿಸಿಗೆ ಸೇರಿಸಿ ಕೇಂದ್ರ ಸರಕಾರ 2000, ಏ.4ರಲ್ಲಿ ಅಧಿಸೂಚನೆ ಹೊರಡಿಸಿತು. ಈ ಎರಡೂ ಸಂದರ್ಭದಲ್ಲಿ ಮೋದಿ ಅಧಿಕಾರದಲ್ಲಿರಲಿಲ್ಲ’ ಎಂದು ಕೇಂದ್ರ ಸರಕಾರ ಹೇಳಿದೆ.