ವಾಷಿಂಗ್ಟನ್/ಹೊಸದಿಲ್ಲಿ: ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು “ಮುಸ್ಲಿಂ ಲೀಗ್’ ಕುರಿತು ನೀಡಿದ ಹೇಳಿಕೆಯೊಂದು ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಕೇರಳದಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷವಾಗಿರುವ ಮುಸ್ಲಿಂ ಲೀಗ್ “ಪಕ್ಕಾ ಜಾತ್ಯತೀತ ಪಕ್ಷ’ ಎಂಬ ರಾಹುಲ್ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿನ ನ್ಯಾಶನಲ್ ಪ್ರಸ್
ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ನಡೆದ ಸಂವಾದದ ವೇಳೆ ವರದಿಗಾರರೊಬ್ಬರು ರಾಹುಲ್‌ಗೆ, “ಬಿಜೆಪಿಯ ಹಿಂದುತ್ವ ರಾಜಕೀಯವನ್ನು ವಿರೋಧಿಸುವ ಕಾಂಗ್ರೆಸ್, ಕೇರಳದಲ್ಲಿ ಮುಸ್ಲಿಂ ಲೀಗ್ ಜತೆಗೆ ಮೈತ್ರಿ ಮಾಡಿಕೊಂಡಿದೆಯಲ್ಲವೇ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ರಾಹುಲ್‌ಗಾಂಧಿ, “ಮುಸ್ಲಿಂ ಲೀಗ್ ಎನ್ನುವುದು ಸಂಪೂರ್ಣವಾಗಿ ಜಾತ್ಯತೀತ ಪಕ್ಷ. ಅವರ ಜಾತ್ಯತೀತತೆಯಲ್ಲಿ ಎಳ್ಳಷ್ಟೂ ಅನುಮಾನವಿಲ್ಲ’ ಎಂದಿದ್ದರು.
ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸುತ್ತಿದ್ದಂತೆಯೇ ರಾಹುಲ್ ವಿರುದ್ಧ ವಾಗ್ಧಾಳಿ ನಡೆಸಿರುವ ಕೇಂದ್ರ ಸಚಿವ ಕಿರಣ್ ರಿಜಿಜು, “ಮೊಹಮ್ಮದ್ ಅಲಿ ಜಿನ್ನಾ ಅವರ ಮುಸ್ಲಿಂ ಲೀಗ್ ಜಾತ್ಯತೀತವೇ? ಧರ್ಮದ ಆಧಾರದಲ್ಲಿ ಭಾರತದ ವಿಭಜನೆಗೆ ಕಾರಣವಾದ ಪಕ್ಷ ಜಾತ್ಯತೀತವೇ?’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, “ಮೊಹಮ್ಮದ್ ಅಲಿ ಜಿನ್ನಾರ ಮುಸ್ಲಿಂ ಲೀಗ್‌ಗೂ, ಕೇರಳ ಮೂಲದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಡುವೆ ವ್ಯತ್ಯಾಸವೇ ಗೊತ್ತಿಲ್ಲದಷ್ಟು ಬಿಜೆಪಿಯವರು ಅನಕ್ಷರಸ್ಥರೇ? ಜಿನ್ನಾರ ಮುಸ್ಲಿಂ ಲೀಗ್ ಎಂದರೆ ನಿಮ್ಮ ಪೂರ್ವಜರು ಮೈತ್ರಿ ಮಾಡಿಕೊಂಡಿದ್ದ ಪಕ್ಷ. ಕೇರಳದ ಮುಸ್ಲಿಂ ಲೀಗ್ ಎನ್ನುವುದು ಒಂದು ಕಾಲದಲ್ಲಿ ಬಿಜೆಪಿ ಜತೆ ಕೈಜೋಡಿಸಿದ್ದ ಪಕ್ಷ’ ಎಂದು ಟ್ವೀಟ್ ಮಾಡಿದ್ದಾರೆ. ಪವನ್ ಖೇರಾ ಈ ಹೇಳಿಕೆಗೆ ಬಹಳ ಗಟ್ಟಿಯಾದ ಆಧಾರಗಳೇನಿಲ್ಲ. ಸ್ವಾತಂತ್ರ್ಯ ಚಳವಳಿ ಹೊತ್ತಿನಲ್ಲಿ ಜಿನ್ನಾ ಮುಸ್ಲಿಮ್ ಲೀಗ್‌ನೊಂದಿಗೆ ಆರ್‌ಎಸ್‌ಎಸ್ ಕೈಜೋಡಿಸಿತ್ತು ಎಂಬ ವದಂತಿಗಳು ಇವೆ. ಹಾಗೆಯೇ 2012ರಲ್ಲಿ ನಾಗಪುರ ನಗರ ಪಾಲಿಕೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಇಬ್ಬರು ಐಯುಎಂಎಲ್ ಕಾರ್ಪೊರೇಟರ್‌ಗಳ ಬೆಂಬಲ ಪಡೆದಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಖೇರಾ ಹೇಳಿದ್ದಾರೆ.
ಇದನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ವಿರೋಧಿಸಿದ್ದಾರೆ. “ಇವರೇ ದೇಶ ವಿಭಜನೆ ಬಳಿಕವೂ ಭಾರತದಲ್ಲೇ ಉಳಿದುಕೊಂಡವರು. ವಿಭಜನೆಯ ಅನಂತರ ಇಲ್ಲಿ ಮುಸ್ಲಿಂ ಲೀಗ್ ಸ್ಥಾಪಿಸಿ, ಸಂಸದರಾದರು. ಇವರು ಶರಿಯಾ ಕಾನೂನಿನ ಪರ ಧೋರಣೆ ಹೊಂದಿದವರು. ಮುಸ್ಲಿಮರಿಗೆ ಪ್ರತ್ಯೇಕ ಸೀಟುಗಳು ಮೀಸಲಿಡಬೇಕು ಎಂದು ಒತ್ತಾಯಿಸಿದವರು. ಹೀಗಿದ್ದರೂ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ಗೆ ಹಿಂದೂ ಭಯೋತ್ಪಾದನೆ ಕಾಣುತ್ತದೆ. ಆದರೆ ಮುಸ್ಲಿಂ ಲೀಗ್ ಜಾತ್ಯತೀತವಾಗಿ ಕಾಣುತ್ತದೆ’ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಕಿಡಿಕಾರಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರ, ಸಂಸದ ಸುಧಾಂಶು ತ್ರಿವೇದಿ ಪ್ರತಿಕ್ರಿಯಿಸಿ, “ಕಾಂಗ್ರೆಸ್‌ಗೆ ಎಐಎಂಐಎಂ, ಮುಸ್ಲಿಂ ಲೀಗ್, ಇಂಡಿಯನ್ ಸೆಕ್ಯುಲರ್ ಫ್ರಂಟ್‌ನಂಥ ಪಕ್ಷಗಳೆಲ್ಲ ಜಾತ್ಯತೀತವಾಗಿಯೂ, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ವು ಸಾಂಸ್ಕೃತಿಕ ಸಂಘಟನೆಯಾಗಿಯೂ ಕಾಣಿಸುತ್ತದೆ. ರಾಹುಲ್ ಅವರ ಹೇಳಿಕೆಯು ಅವರ ತಿಳಿವಳಿಕೆಯ ಮಟ್ಟವನ್ನು ತೋರಿಸುತ್ತಿದೆ’ ಎಂದಿದ್ದಾರೆ.
ಇನ್ನು “ರಾಹುಲ್ ಅವರ ಬೌದ್ಧಿಕ ಸಾಮರ್ಥ್ಯವೇ ಸೀಮಿತವಾಗಿರುವ ಕಾರಣ, ಅವರ ಹೇಳಿಕೆಗಳನ್ನು ನಾನು ಕ್ಷಮಿಸುತ್ತೇನೆ’ ಎಂದು ಕೇರಳ ಬಿಜೆಪಿ ನಾಯಕ ಕೆ.ಜೆ. ಅಲೊ#àನ್ಸ್ ಹೇಳಿದ್ದಾರೆ.
ಬಿಜೆಪಿಗೆ ಸೋಲುಣಿಸುತ್ತೇವೆ: ರಾಹುಲ್
ಮುಂದಿನ ಮೂರು-ನಾಲ್ಕು ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಮಣಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಡಳಿತಾರೂಢ ಪಕ್ಷವು ಈಗ ಬಹುತೇಕ ಭಾರತೀಯರ ಬೆಂಬಲ ಕಳೆದುಕೊಂಡಿದೆ. ಬಿಜೆಪಿಯನ್ನು ಸೋಲಿಸಲು ಬೇಕಾದ ಅಗತ್ಯ ಕಾರ್ಯತಂತ್ರಗಳು ಈಗ ನಮ್ಮ ಬಳಿಯಿವೆ. ಕರ್ನಾಟಕದಲ್ಲಿ ನಾವೇನು ಮಾಡಿದೆವೋ ಅದನ್ನೇ ಉಳಿದ ರಾಜ್ಯಗಳಲ್ಲೂ ಮಾಡುತ್ತೇವೆ. ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿಯಿರುವ ರಾಜ್ಯಗಳಲ್ಲಿ ಬಿಜೆಪಿಯನ್ನು ನಾವು ಸೋಲಿಸಿಯೇ ಸೋಲಿಸುತ್ತೇವೆ ಎಂದೂ ರಾಹುಲ್ ವಾಷಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.