ಬೆಂಗಳೂರು:ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪಷ್ಟ ಬಹುಮತ ಪಡೆದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದರೆ ಖಂಡಿತವಾಗಿ ರಾಹುಲ್ ಗಾಂಧಿಯೇ ಪ್ರಧಾನಿಯಾಗುತ್ತಾರೆ. ಆದರೆ, ಮಹಾಘಟ್‌ಬಂಧನ್ ಮೂಲಕ ಚುನಾವಣೆ ಎದುರಿಸುವುದರಿಂದ ಚುನಾವಣೆ ನಂತರ ಏನಾಗಲಿದೆ ಗೊತ್ತಿಲ್ಲ. ಪ್ರಧಾನಿ ಸ್ಥಾನದ ವಿಚಾರದಲ್ಲಿ ಮಹಾಘಟಬಂಧನ್‌ಗೆ ತೊಂದರೆ ಆಗಬಾರದು ಎಂದು ತಿಳಿಸಿದರು.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 1996ರ ಪರಿಸ್ಥಿತಿ ಪುನರಾವರ್ತನೆ ಆಗುತ್ತದೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎನ್ನುವುದು ನಮ್ಮ ನಿಲುವು. ಚುನಾವಣೆ ನಂತರ ರಾಹುಲ್‌ಗಾಂಧಿ ಯಾವ ನಿಲವು ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ಕೇಂದ್ರ ಸರ್ಕಾರ ಸ್ವತಂತ್ರ ತನಿಖಾ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಈ ಬಗ್ಗೆ ಸಂಸತ್ತಿನಲ್ಲಿ ಹಲವಾರು ಬಾರಿ ಮಾತನಾಡಿದ್ದೇನೆ. ಈಗ ಅದು ಬೇರೆ ಪಕ್ಷಗಳಿಗೂ ಬಿಸಿ ತಟ್ಟಿದೆ. ಸಿಬಿಐ, ಇಡಿಗಳ ಮೂಲಕ ವಿಶ್ವ ವಿದ್ಯಾಲಯಗಳು, ಪತ್ರಿಕಾ ಸಂಸ್ಥೆಗಳ ಮೇಲೂ ದಾಳಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧದ ವರದಿ ಪ್ರಕಟಗೊಂಡರೆ ಪತ್ರಿಕಾ ಸಂಸ್ಥೆಗಳ ಮೇಲೆ ಒತ್ತಡ ಹೇರಿ ಅವುಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ತಮ್ಮ ಅಜೆಂಡಾ ಹೇರಲಾಗುತ್ತಿದೆ. ಇದು ಪ್ರಜಾಪ್ರಭುತ್ವ. ಇಲ್ಲಿ ಕಾನೂನಿದೆ. ಕೇಂದ್ರ ಸರ್ಕಾರ ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಪರಮೇಶ್ವರ್ ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಈ ಕುರಿತು ರಾಜ್ಯ ನಾಯಕರು ಮತನಾಡುತ್ತಾರೆ. ರಾಜ್ಯ ರಾಜಕಾರಣದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.