Advertisement

ರಾಹುಲ್‌ ಯಾತ್ರೆ: ಕರಾವಳಿ ‘ಕೈ’ಪಾಳಯದಲ್ಲಿ ಹೆಚ್ಚಿದ ಹುಮ್ಮಸ್ಸು

08:45 AM Mar 22, 2018 | Karthik A |

ಮಂಗಳೂರು: ಕರಾವಳಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ‘ಜನಾಶೀರ್ವಾದ ಯಾತ್ರೆ’ಯು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿರುವುದು ಕಾಂಗ್ರೆಸ್‌ ಪಾಳೆಯದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಅದರಲ್ಲಿಯೂ ರಾಹುಲ್‌ ಗಾಂಧಿಯವರ ರೋಡ್‌ ಶೋ ಹಾಗೂ ಬಹಿರಂಗ ಸಭೆಗಳಿಗೆ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ನಿರೀಕ್ಷೆಗೂ ಮೀರಿ ವ್ಯಕ್ತವಾಗಿರುವ ಸ್ಪಂದನೆಯು ಇದೀಗ ಕರಾವಳಿಯಲ್ಲಿ ರಾಹುಲ್‌ ಗಾಂಧಿ ಅಲೆಯನ್ನು ಸೃಷ್ಟಿಸುವ ಜತೆಗೆ ಕಾಂಗ್ರೆಸ್‌ ವಲಯದಲ್ಲಿಯೂ ಚುನಾವಣಾ ಪ್ರಚಾರಕ್ಕೆ ಹೊಸ ಶಕ್ತಿ ತುಂಬುವಂತೆ ಮಾಡಿದೆ.

Advertisement

ಉಡುಪಿ ಜಿಲ್ಲೆಯ ಕಾಪುವಿನಿಂದ ಮಂಗಳೂರುವರೆಗೆ ಮಂಗಳವಾರ ನಡೆದ ಜನಾಶೀರ್ವಾದ ಯಾತ್ರೆ ಸಂದರ್ಭದಲ್ಲಿ ಹಾದಿಯುದ್ದಕ್ಕೂ ಸೇರಿದ ಜನಸ್ತೋಮ, ಮಂಗಳೂರಿನಲ್ಲಿ ನಡೆದ ರೋಡ್‌ಶೋ ಹಾಗೂ ನೆಹರೂ ಮೈದಾನಿನಲ್ಲಿ ಜರಗಿದ ಬಹಿರಂಗ ಸಭೆಯಲ್ಲಿ ಬೃಹತ್‌ ಸಂಖ್ಯೆಯಲ್ಲಿ ಸೇರಿದ ಜನ ಸಮೂಹ ಕಂಡು ಸ್ವತಃ ಕಾಂಗ್ರೆಸ್‌ ನಾಯಕರು ಬಹಳ ಖುಷಿಯಾಗಿದ್ದಾರೆ. ಕರಾವಳಿಯಲ್ಲಿ ಇತ್ತೀಚೆಗೆ ಅಮಿತ್‌ ಶಾ ಅವರ ಮಿಂಚಿನ ಸಂಚಾರದ ಮೂಲಕ ಬಿಜೆಪಿ ಸೃಷ್ಟಿಸಿದ ರಾಜಕೀಯ ಸಂಚಲನಕ್ಕೆ ಅದೇ ಮಾದರಿಯಲ್ಲಿ ಪ್ರತ್ಯುತ್ತರ ನೀಡುವಲ್ಲಿ ರಾಹುಲ್‌ ಗಾಂಧಿಯವರು ಯಶಸ್ವಿಯಾಗಿದ್ದಾರೆ ಎಂಬ ಸಂತೃಪ್ತಿ ಕಾಂಗ್ರೆಸ್‌ ಪಾಳೆಯದಲ್ಲಿ ಮೂಡಿದೆ.

ಸಂತಸ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಾಶೀರ್ವಾದ ಯಾತ್ರೆಗೆ ವ್ಯಕ್ತವಾಗಿರುವ ಭಾರಿ ಜನ ಸ್ಪಂದನೆಗೆ ರಾಹುಲ್‌ ಗಾಂಧಿಯವರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನು ನೆಹರೂ ಮೈದಾನಿನಲ್ಲಿ ಮಂಗಳವಾರ ಜರಗಿದ ಬಹಿರಂಗ ಸಭೆಯಲ್ಲೂ ವ್ಯಕ್ತಪಡಿಸಿದ್ದರು. ಬುಧವಾರ ಸರ್ಕಿಟ್‌ ಹೌಸ್‌ನಲ್ಲಿ ಜರಗಿದ ಉಭಯ ಜಿಲ್ಲೆಗಳ ಬ್ಲಾಕ್‌ ಅಧ್ಯಕ್ಷರುಗಳ ಹಾಗೂ ಪಕ್ಷದ ಪ್ರಮುಖ ನಾಯಕರ ಸಭೆಯಲ್ಲೂ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು ಇಲ್ಲಿಯ ಪಕ್ಷ ಸಂಘಟನೆಯ ರೀತಿ ಇಡೀ ದೇಶಕ್ಕೆ ಮಾದರಿ ರೀತಿಯಲ್ಲಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಎಐಸಿಸಿ ಅಧ್ಯಕ್ಷರ ಕ್ರಮಕ್ಕೆ ಮೆಚ್ಚುಗೆ
ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಜಿಲ್ಲೆಯಲ್ಲಿ ಬ್ಲಾಕ್‌ ಅಧ್ಯಕ್ಷರುಗಳೊಂದಿಗೆ ಸಂವಾದ ನಡೆಸಿರುವುದು ಪಕ್ಷದ ತಳಮಟ್ಟದ ನಾಯಕರು ಹಾಗೂ ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯಾಧ್ಯಕ್ಷರು ಜಿಲ್ಲೆಗೆ ಬಂದು ತಳಮಟ್ಟದಲ್ಲಿ ಪಕ್ಷದ ಪದಾಧಿಕಾರಿಗಳ ಜತೆ ಸಭೆ ನಡೆಸಿರುವುದು ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಇತಿಹಾಸದಲ್ಲೇ ಇದು ಪ್ರಥಮ. ರಾಹುಲ್‌ ಅವರ ಈ ಸ್ಪಂದನೆ ಪಕ್ಷದ ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರನ್ನು ಉಲ್ಲಸಿತಗೊಳಿಸಿದೆ ಎಂದು ಸಭೆಯಲ್ಲಿ ಭಾಗವಹಿಸಿದ ಬ್ಲಾಕ್‌ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ಲಾಕ್‌ ಅಧ್ಯಕ್ಷರ ಜತೆ ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರನ್ನು ಗುರುತಿಸಿ ಅವರ ಜತೆಯೂ ಸಂವಾದ ನಡೆಸಿ ಹಿರಿಯ ನಾಯಕರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳುವ ರಾಜಕೀಯ ಕಾರ್ಯತಂತ್ರ ಅನುಸರಿಸಿದ್ದಾರೆ.

ಸರ್ಕಿಟ್‌ ಹೌಸ್‌ನಲ್ಲಿ ವಾಸ್ತವ್ಯ
ರಾಹುಲ್‌ ಅವರು ಮಂಗಳವಾರ ರಾತ್ರಿ ಬಹಿರಂಗ ಸಭೆಯ ಬಳಿಕ ರೊಸಾರಿಯೋ ಕೆಥಡ್ರಲ್‌, ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಬಳಿಕ ಉಳ್ಳಾಲ ದರ್ಗಾಕ್ಕೆ ತೆರಳಿದರು. ಅಲ್ಲಿಂದ ರಾತ್ರಿ ಸುಮಾರು 11.20ರ ವೇಳೆಗೆ ಸರ್ಕಿಟ್‌ ಹೌಸ್‌ಗೆ ಆಗಮಿಸಿದ್ದರು. ರಾತ್ರಿ 12 ಗಂಟೆಯ ವೇಳೆಗೆ ನಿದ್ರಿಸಿದರು. ಹೊಸ ಸರ್ಕಿಟ್‌ ಹೌಸ್‌ನ ಸೂಟ್‌ ನಂ.1ರಲ್ಲಿ ರಾಹುಲ್‌ ಗಾಂಧಿಯವರು ವಾಸ್ತವ್ಯ ಹೂಡಿದ್ದರು. ಪಕ್ಕದ ಸೂಟ್‌ ನಂ. 2ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಂಗಿದ್ದರು. ಸೂಟ್‌ ನಂ. 3ನ್ನು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಅವರಿಗೆ ವ್ಯವಸ್ಥೆಗೊಳಿಸಲಾಗಿತ್ತು.

Advertisement

ಎಳನೀರು ಪುಡ್ಡಿಂಗ್‌, ನೀರುದೋಸೆ 
ರಾಹುಲ್‌ ಅವರಿಗೆ ಬೆಂದೂರ್‌ವೆಲ್‌ನ ಫಿಶ್‌ ಮಾರ್ಕೆಟ್‌ ಹೊಟೇಲ್‌ನಿಂದ ರಾತ್ರಿ ಊಟ ಹಾಗೂ ಓಶಿಯನ್‌ ಪರ್ಲ್ ಹೊಟೇಲ್‌ನಿಂದ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಊಟ ಮೆನುವಿನಂತೆ ವಿಶೇಷವಾಗಿ ಮೀನು ಖಾದ್ಯಗಳಾದ ಕಾಣೆ, ಅಂಜಲ್‌, ಮಾಂಜಿ, ಸಿಗಡಿ ಹಾಗೂ ಕರಾವಳಿಯ ವಿಶೇಷ ತಿನಿಸುಗಳಾದ ಕೋರಿರೊಟ್ಟಿ, ನೀರುದೋಸೆ ಮುಂತಾದುವುಗಳನ್ನು ಸಿದ್ಧಪಡಿಸಲಾಗಿತ್ತು. ರಾಹುಲ್‌ ಅವರು ರಾತ್ರಿ ಎಳನೀರು ಪುಡ್ಡಿಂಗ್‌, ನೀರುದೋಸೆ, ರಾಗಿಮಣ್ಣಿ  ಸೇವಿಸಿದರು. ಮುಖ್ಯಮಂತ್ರಿಯವರು ಮೀನಿನ ಖಾದ್ಯ ಹಾಗೂ ಬಿರಿಯಾಣಿ ಸೇವಿಸಿದರು. ರಾಹುಲ್‌ ಅವರು 8 ಗಂಟೆಗೆ ಬೆಳಗ್ಗಿನ ಲಘು ಉಪಹಾರ ಸೇವಿಸಿದರು. ಇಡ್ಲಿ, ವಡಾ, ಮೂಡೆ, ಮಸಾಲೆದೋಸೆ, ನೀರುದೋಸೆ, ಸಜ್ಜಿಗೆ ಬಜಿಲ್‌, ರಾಗಿಮಣ್ಣಿ, ಸಂಬಾರ್‌, ಚಟ್ನಿ ಮುಂತಾದ ತಿಂಡಿಗಳನ್ನು ಸಿದ್ಧಪಡಿಸಿದ್ದರೂ ರಾಹುಲ್‌ ಅವರು ಬ್ರೌನ್‌ ಬ್ರೆಡ್‌, ಜಾಮ್‌ ಹಾಗೂ ಪಪ್ಪಾಯಿ ಹಣ್ಣು ಸೇವಿಸಿದರು. 

ಮತ್ತೂಮ್ಮೆ ಭೇಟಿಯ ಭರವಸೆ
ಜನಾಶೀರ್ವಾದ ಯಾತ್ರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ,ಮಂಗಳೂರು ದಕ್ಷಿಣ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಪ್ರವಾಸ ಮಾಡಲು ಮಾತ್ರ ಸಾಧ್ಯವಾಗಿದೆ. ಇನ್ನುಳಿದಂತೆ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ಕ್ಷೇತ್ರಗಳು ಬಾಕಿ ಇವೆ. ಬೆಳ್ತಂಗಡಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾಗವಾಗಿದ್ದ ಸಂದರ್ಭದಲ್ಲಿ ನನ್ನ ಅಜ್ಜಿ ಇಂದಿರಾ ಗಾಂಧಿಯವರನ್ನು ಗೆಲ್ಲಿಸಿದ ಕ್ಷೇತ್ರವಾಗಿದೆ. ಸದ್ಯದಲ್ಲೇ ಇನ್ಮೊಮ್ಮೆ ದ.ಕ.ಜಿಲ್ಲೆಗೆ ಭೇಟಿ ನೀಡಿ ಬಾಕಿ ಇರುವ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡುತ್ತೇನೆ ಎಂಬುದಾಗಿ ರಾಹುಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಸಭೆಯಲ್ಲಿ ಭರವಸೆ ನೀಡಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ಕಂಬಳ ಬೆತ್ತ ಕೈಯಲ್ಲೇ ಉಳಿಯಿತು
ರಾಹುಲ್‌ಗೆ ನೀಡಲು ಕಾಂಗ್ರೆಸ್‌ ಪದಾಧಿಕಾರಿ ಯೋರ್ವರು ಕಂಬಳದ ಕೋಣಗಳನ್ನು ಓಡಿಸುವಾಗ ಹಿಡಿಯುವ ಬೆತ್ತವನ್ನು ಮಂಗಳವಾರ ತಂದಿದ್ದರು. ಈ ಬೆತ್ತದ ಅರ್ಧ ಭಾಗ ಬೆಳ್ಳಿಯಿಂದ ಅಲಂಕರಿಸಲಾಗಿತ್ತು. ಆದರೆ ಸರ್ಕಿಟ್‌ಹೌಸ್‌ನಲ್ಲಿ ಎಸ್‌ಪಿಜಿಯವರು ಪಾಸ್‌ ನೀಡಿರುವವರ ಹೊರತಾಗಿ ಯಾರಿಗೂ ಅನುಮತಿ ನೀಡದಿದ್ದು ದರಿಂದ ಈ ಬೆತ್ತ ತಂದವರ ಕೈಯಲ್ಲೇ ಉಳಿಯಿತು.

— ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next