Advertisement

ಕಾಡುತ್ತಿದೆ ಭುಜದ ನೋವು ಐಪಿಎಲ್‌ನಿಂದ ರಾಹುಲ್‌ ಔಟ್‌

12:35 PM Apr 01, 2017 | Harsha Rao |

ಬೆಂಗಳೂರು: ಇನ್‌-ಫಾರ್ಮ್ ಆರಂಭಕಾರ ಕೆ.ಎಲ್‌. ರಾಹುಲ್‌ ಭುಜದ ನೋವಿನಿಂದಾಗಿ 2017ರ ಐಪಿಎಲ್‌ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ. ಇದರಿಂದ ಐಪಿಎಲ್‌ ಕ್ಷಣಗಣನೆಯಲ್ಲಿದ್ದ ಆರ್‌ಸಿಬಿ ಹಾಗೂ ಆ ತಂಡದ ಅಭಿಮಾನಿಗಳಿಗೆ ಆಘಾತವಾಗಿದೆ. 

Advertisement

“ಹೌದು, ನಾನು ಈ ಸಲದ ಐಪಿಎಲ್‌ನಿಂದ ಹೊರ ಗುಳಿಯಲಿದ್ದೇನೆ. ಈ ಸಂದರ್ಭದಲ್ಲಿ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ. ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಇದನ್ನು ಅಧಿಕೃತವಾಗಿ ಪ್ರಕಟಿಸಲಿದೆ…’ ಎಂದು ರಾಹುಲ್‌ ಮಾಧ್ಯಮದವ ರಲ್ಲಿ ಹೇಳಿ ದ್ದಾರೆ. ರಾಹುಲ್‌ ಬದಲು ತಮಿಳುನಾಡಿನ ನಾರಾಯಣ್‌ ಜಗದೀಶನ್‌ ಆರ್‌ಸಿಬಿ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.

21 ವರ್ಷದ ಜಗ ದೀಶನ್‌ ಇತ್ತೀಚೆಗೆ ಮುಗಿದ “ದೇವಧರ್‌ ಟ್ರೋಫಿ’ ಪಂದ್ಯಾವಳಿಯಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡುವ ಮೂಲಕ ತಮಿಳು ನಾಡು ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. “ತಮಿಳುನಾಡು ಪ್ರೀಮಿಯರ್‌ ಲೀಗ್‌’ ನಲ್ಲಿಯೂ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಜಗದೀಶನ್‌ ಎ. 2ಕ್ಕೆ ಆರ್‌ಸಿಬಿ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ.

ಆರ್‌ಸಿಬಿ ಮೂಲದ ಪ್ರಕಾರ ಕೆ.ಎಲ್‌. ರಾಹುಲ್‌ ಭುಜದ ಚಿಕಿತ್ಸೆಗಾಗಿ ಶೀಘ್ರದಲ್ಲೇ ಲಂಡನ್‌ಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಅವರಿಗೆ ಎಷ್ಟು ಕಾಲ ವಿಶ್ರಾಂತಿ ಬೇಕಿದೆ ಎಂಬುದು ತಿಳಿದು ಬಂದಿಲ್ಲ. ಜೂನ್‌ನಲ್ಲಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಗೆ ಸಂಪೂರ್ಣ ದೈಹಿಕ ಕ್ಷಮತೆಯೊಂದಿಗೆ ಆಡಲಿಳಿಯುವುದು ರಾಹುಲ್‌ ಯೋಜನೆಯಾಗಿದೆ.

ಆರ್‌ಸಿಬಿಗೆ ಅವಳಿ ಆಘಾತ
ರಾಹುಲ್‌ ಐಪಿಎಲ್‌ನಿಂದ ಬೇರ್ಪಡುವುದರೊಂದಿಗೆ ಆರ್‌ಸಿಬಿ ಅವಳಿ ಆಘಾತಕ್ಕೆ ಸಿಲುಕಿದೆ. ತಂಡದ ನಾಯಕ ಕೊಹ್ಲಿ ಕೂಡ ಭುಜದ ಸಮಸ್ಯೆಯಿಂದಲೇ ಸರಣಿಯ ಮೊದಲ ಸುತ್ತಿನ ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. 
24ರ ಹರೆಯದ ಕೆ.ಎಲ್‌. ರಾಹುಲ್‌ ಆಸ್ಟ್ರೇಲಿಯ ಎದುರಿನ ಮೊದಲ ಟೆಸ್ಟ್‌ ವೇಳೆಯೇ ಎಡ ಭುಜದ ನೋವಿಗೆ ಸಿಲುಕಿದ್ದರು. ಆದರೆ ಇದೇನೂ ಗಂಭೀರ ಸ್ವರೂಪದ್ದಲ್ಲವಾದ್ದರಿಂದ ಆಟ ಮುಂದುವರಿಸಿದರು. ಆಸ್ಟ್ರೇಲಿಯ ವಿರುದ್ಧದ ಬೆಂಗಳೂರು ಟೆಸ್ಟ್‌ ಪಂದ್ಯದ ವೇಳೆ ನೋವಿನ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್‌, ಭುಜದ ನೋವಿನಿಂದಾಗಿ ದೊಡ್ಡ ದೊಡ್ಡ ಹೊಡೆತಗಳನ್ನು ಬಾರಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದರು.

Advertisement

ಆಸ್ಟ್ರೇಲಿಯ ವಿರುದ್ಧ ಆಡಿದ 7 ಇನ್ನಿಂಗ್ಸ್‌ಗಳಲ್ಲಿ 6 ಅರ್ಧ ಶತಕ ಸಹಿತ ಸರಣಿಯಲ್ಲಿ ದ್ವಿತೀಯ ಸರ್ವಾಧಿಕ ರನ್‌ ಪೇರಿಸಿದ ಭಾರತದ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ರಾಹುಲ್‌ ಪಾತ್ರರಾಗಿದ್ದರು.

ರಾಹುಲ್‌ ಕಳೆದ ಐಪಿಎಲ್‌ನಲ್ಲಿ ಆರ್‌ಸಿಬಿಯ 3ನೇ ಸರ್ವಾಧಿಕ ಸ್ಕೋರರ್‌ ಆಗಿ ಮೂಡಿಬಂದಿದ್ದರು. 12 ಇನ್ನಿಂಗ್ಸ್‌ಗಳಿಂದ 397 ರನ್‌ ಬಾರಿಸಿ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ ಅನಂತರದ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು.

ಅಶ್ವಿ‌ನ್‌ ಕೂಡ ಐಪಿಎಲ್‌ನಿಂದ ದೂರ
ಐಪಿಎಲ್‌ ಆರಂಭಕ್ಕೂ ಮೊದಲೇ ಭಾರತದ ಸ್ಟಾರ್‌ ಆಟಗಾರರು ಒಬ್ಬೊಬ್ಬರಾಗಿ ಗಾಯಕ್ಕೆ ತುತ್ತಾಗು ತ್ತಿದ್ದಾರೆ. ಮೊದಲು ವಿರಾಟ್‌ ಕೊಹ್ಲಿ, ಅನಂತರ ಕೆ.ಎಲ್‌. ರಾಹುಲ್‌. ಈಗ ಪುಣೆಯ ಆರ್‌. ಅಶ್ವಿ‌ನ್‌ ಸರದಿ.
ಅಶ್ವಿ‌ನ್‌ ಹರ್ನಿಯಾ ಸಮಸ್ಯೆಗೆ ಒಳಗಾಗಿದ್ದಾರೆ. ಅವರಿಗೆ ಸುಮಾರು 6ರಿಂದ 8 ವಾರಗಳ ವಿಶ್ರಾಂತಿ ಅಗತ್ಯವಿದೆ. ಹೀಗಾಗಿ ಐಪಿಎಲ್‌ನಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ. ಚೇತರಿಸಿಕೊಂಡ ಬಳಿಕ ಜೂನ್‌ನಲ್ಲಿ ಆರಂಭವಾಗುವ ಚಾಂಪಿಯನ್ಸ್‌ ಟ್ರೋಫಿಗೆ ಅಶ್ವಿ‌ನ್‌ ಲಭ್ಯರಾಗಲಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಅಶ್ವಿ‌ನ್‌ ಎನ್‌ಸಿಎ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next