ಹೊಸದಿಲ್ಲಿ : ”ಪ್ರಧಾನಿ ನರೇಂದ್ರ ಮೋದಿ ಅವರು ಎಂದಾದರೂ ಕಾಲೇಜಿಗೆ ಹೋಗಿದ್ದಾರಾ ? ಯಾವುದಾದರೂ ಯುನಿವರ್ಸಿಟಿಗೆ ಹೋಗಿದ್ದಾರಾ ? ಯಾವುದಾದರೂ ಡಿಗ್ರಿ ಪಡೆದಿದ್ದಾರಾ ? ಈ ಬಗ್ಗೆ ಯಾರಿಗೂ ಏನೂ ಗೊತ್ತಿಲ್ಲ; ಪ್ರಧಾನಿ ಮೋದಿ ಅವರ ಶೈಕ್ಷಣಿಕ ಅರ್ಹತೆ ಏನೆಂಬುದು ಯಾರಿಗೂ ಗೊತ್ತಿಲ್ಲ; ಅದನ್ನು ಸ್ವತಃ ಮೋದಿಯೇ ಗುಟ್ಟಾಗಿಟ್ಟಿದ್ದಾರೆ” ಎಂದು ಆರೋಪಿಸುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರ ಶೈಕ್ಷಣಿಕ ಅರ್ಹತೆಯನ್ನು ಪ್ರಶ್ನಿಸಿದ್ದು ಇಂಫಾಲ್ ನಲ್ಲಿ ನೂರಾರು ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಿದ ಸಂದರ್ಭದಲ್ಲಿ !
2017ರಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಕೂಡ ಪ್ರಧಾನ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಯನ್ನು ಪ್ರಶ್ನಿಸಿ ಪೇಚಿಗೆ ಸಿಲುಕಿಕೊಂಡಿದ್ದರು. ಅದೇ ರೀತಿ ದಿಲ್ಲಿ ಮುಖ್ಯಮಂತ್ರಿ, ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಕೂಡ ಪ್ರಧಾನಿ ಮೋದಿ ಶೈಕ್ಷಣಿಕ ಅರ್ಹತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿ ಪ್ರಶ್ನೆಗಳನ್ನು ಎತ್ತಿದ್ದರು.
ಆ ಸಂದರ್ಭದಲ್ಲೇ ದಿಲ್ಲಿ ವಿಶ್ವವಿದ್ಯಾಲಯ ಮತ್ತು ಗುಜರಾತ್ ವಿಶ್ವವಿದ್ಯಾಲಯಗಳ ರಿಜಿಸ್ಟ್ರಾಟರು ಪ್ರಧಾನಿ ಮೋದಿ ಬಿಎ ಮತ್ತು ಎಂಎ ಡಿಗ್ರಿಗಳನ್ನು ಪಡೆದಿದ್ದುದನ್ನು ದೃಢೀಕರಿಸಿದ್ದರು.
ಪ್ರಧಾನಿ ಮೋದಿ ಅವರು 1979ರಲ್ಲಿ ದಿಲ್ಲಿ ವಿಶ್ವವಿದ್ಯಾಲಯದಿಂದ ಬಿಎ ಪದವಿಯನ್ನೂ 2016ರಲ್ಲಿ ಗುಜರಾತ್ ವಿವಿಯಿಂದ ಎಂಎ ಪದವಿಯನ್ನೂ ಪಡೆದಿದ್ದುದು ಎರಡು ವರ್ಷಗಳ ಹಿಂದೆಯೇ ಎಲ್ಲರಿಗೂ ದೃಢವಾಗಿತ್ತು.