ಹೊಸದಿಲ್ಲಿ : “ನಾನು ಚೌಕೀದಾರ ಅಲ್ಲ; ನಾನೊಬ್ಬ ಚಿಂತಕ; ಅಪರಾಧಿಗಳನ್ನು ಕಾನೂನಡಿ ಹೇಗೆ ಶಿಕ್ಷಿಸಬಹುದು ಎಂಬುದನ್ನಷ್ಟೇ ನಾನು ಆಲೋಚಿಸುತ್ತಿರುತ್ತೇನೆ” ಎಂದು ಬಿಜೆಪಿಯ ಹಿರಿಯ ನಾಯಕ, ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಝೀ ನ್ಯೂಸ್ ಏರ್ಪಡಿಸಿದ ಇಂಡಿಯಾ ಕಾ ಡಿಎನ್‌ಎ ವೇದಿಕೆಯಲ್ಲಿ ಮಾತನಾಡುತ್ತಿದ್ದ ಅವರು, ”ರಾಬರ್ಟ್ ವಾದ್ರಾ ಶೀಘ್ರವೇ ಬಂಧನಕ್ಕೆ ಗುರಿಯಾಗಲಿದ್ದಾರೆ ಎಂದು ಹೇಳುತ್ತೇನೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಈಗಾಗಲೇ ಜಾಮೀನಿನಲ್ಲಿ ಹೊರಗಿದ್ದಾರೆ; ರಾಹುಲ್ ಗಾಂಧಿ ಅವರ ಬಳಿ ನಾಲ್ಕು ಪಾಸ್ ಪೋರ್ಟ್‌ಗಳಿವೆ; ಅವರು ಹೆಸರು ರಾಹುಲ್ ವಿನ್ಸಿ ಎಂದಾಗಿದೆ” ಎಂದು ಸ್ವಾಮಿ ಹೇಳಿದರು.
ತನ್ನದೇ ಪಕ್ಷದ ಸದಸ್ಯನಾಗಿದ್ದು ಕೇಂದ್ರ ವಿತ್ತ ಸಚಿವರೂ ಆಗಿರುವ ಅರುಣ್ ಜೇತ್ಲಿ ಅವರು ”ಆರ್ಥಿಕ ರಂಗದಲ್ಲಿ ವಿಫಲರಾಗಿದ್ದಾರೆ; ದೇಶದ ಹಳಿ ತಪ್ಪಿರುವ ಆರ್ಥಿಕ ನೀತಿಗಳನ್ನು ಮತ್ತೆ ಸರಿಪಡಿಸಿ ಹೇಗೆ ಹಳಿಗೆ ತರಬಹುದೆಂಬುದನ್ನು ನಾನು ಅವರಿಗೆ ವಿವರಿಸುತ್ತೇನೆ” ಎಂದು ಸ್ವಾಮಿ ಹೇಳಿದರು.
”ಅರ್ಥಶಾಸ್ತ್ರ ಗೊತ್ತಿಲ್ಲದ ಅನೇಕರು ದೇಶದ ವಿತ್ತ ಸಚಿವರಾಗಿದ್ದಾರೆ. ಹಾಗೆಯೇ ಜೇತ್ಲಿ ಮತ್ತು ಚಿದಂಬರಂ ಅರ್ಥಶಾಸ್ತ್ರಜ್ಞರಲ್ಲ. ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರಿಗೆ ಅರ್ಥಶಾಸ್ತ್ರ ತಿಳಿದಿತ್ತು” ಎಂದು ಸ್ವಾಮಿ ಹೇಳಿದರು.
‘ನೋಟು ಅಪನಗದೀಕರಣದ ಪರಿಕಲ್ಪನೆ ಚೆನ್ನಾಗಿಯೇ ಇತ್ತು; ಆದರೆ ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಾಗಿಲ್ಲ; ದೇಶದಲ್ಲಿ ಹಲವಾರು ಬಗೆಯ ತೆರಿಗೆಗಳಿವೆ, ಆದರೆ ಸರಿಯಾದ ತೆರಿಗೆ ನೀತಿ ಇಲ್ಲ’ ಎಂದು ಸ್ವಾಮಿ ಹೇಳಿದರು.