Advertisement

ಪ್ರತ್ಯೇಕತೆಯಿಂದ ಐಸಿಸ್‌ ಉಗ್ರರ ಸೃಷ್ಟಿ: ರಾಹುಲ್‌ ವಿವಾದಾತ್ಮಕಹೇಳಿಕೆ

06:35 AM Aug 24, 2018 | Team Udayavani |

ಹೊಸದಿಲ್ಲಿ: ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಹ್ಯಾಂಬರ್ಗ್‌ನ ಬುಸೆರಿಯಸ್‌ ಸಮ್ಮರ್‌ ಸ್ಕೂಲ್‌ನಲ್ಲಿ ಮಾತನಾಡಿದ ರಾಹುಲ್‌ ಅವರು, ಅಭಿವೃದ್ಧಿ ಪ್ರಕ್ರಿಯೆಯಿಂದ ಹೆಚ್ಚಿನ ಜನರನ್ನು ಹೊರಗಿಟ್ಟರೆ, ಐಸಿಸ್‌ನಂತಹ ಗುಂಪು ಹುಟ್ಟಿಕೊಳ್ಳುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಹುಲ್‌ ಅವರಿಂದ ಸ್ಪಷ್ಟನೆ ಕೋರಿದೆ.

Advertisement

‘ಅಭಿವೃದ್ಧಿಯಿಂದ ಹಿಂದುಳಿದವರು ಹಾಗೂ ದಲಿತರನ್ನು ದೂರವಿಡುತ್ತಿರುವುದರಿಂದ ಐಸಿಸ್‌ನಂತಹ ಬಂಡುಕೋರರು ದೇಶಾದ್ಯಂತ ಸೃಷ್ಟಿಯಾಗಲು ಕಾರಣವಾಗುತ್ತಿದೆೆ. ಇದು ಅಪಾಯಕಾರಿ ಸಂಗತಿ. 21ನೇ ಶತಮಾನದಲ್ಲಿ ನೀವು ಜನರಿಗೆ  ಭವಿಷ್ಯ ಒದಗಿಸಲಾಗದಿದ್ದರೆ, ಇನ್ಯಾರೋ ಈ ಕೆಲಸ ಮಾಡುತ್ತಾರೆ. ಸಮಾಜದ ಉನ್ನತ ವರ್ಗದವರು ಪಡೆದಷ್ಟೇ ಅನುಕೂಲಗಳನ್ನು ಬುಡಕಟ್ಟು ಸಮಯದಾಯ, ಬಡ ರೈತರು, ಕೆಳ ವರ್ಗದ ಜನರು ಪಡೆಯುವುದು ಕೇಂದ್ರ ಸರಕಾರಕ್ಕೆ ಬೇಕಿಲ್ಲ’ ಎಂದೂ ರಾಹುಲ್‌ ಹೇಳಿದ್ದರು. ಅಲ್ಲದೆ, ಭಾರತದಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಥಳಿಸಿ ಹತ್ಯೆ ಘಟನೆಗಳಿಗೆ ನಿರುದ್ಯೋಗ, ನೋಟು ಅಮಾನ್ಯದಿಂದಾಗಿ ಸಣ್ಣ ಉದ್ಯಮಗಳಿಗೆ ಉಂಟಾಗಿರುವ ಹಾನಿ ಹಾಗೂ ಜಿಎಸ್‌ಟಿಯನ್ನು ಕಳಪೆಯಾಗಿ ಜಾರಿಗೆ ತಂದಿದ್ದೇ ಕಾರಣ ಎಂದೂ ಕಾಂಗ್ರೆಸ್‌ ಅಧ್ಯಕ್ಷ ಆರೋಪಿಸಿದ್ದಾರೆ. ಸರಕಾರದ ಈ ಕ್ರಮಗಳಿಂದ ಸಿಟ್ಟಾದ ಜನರು ಹತ್ಯೆಗೆ ಮುಂದಾಗುತ್ತಿದ್ದಾರೆ ಎಂದಿದ್ದಾರೆ.

ಜರ್ಮನಿಯಲ್ಲಿ ಸುಳ್ಳು ಹೇಳಿದ ರಾಹುಲ್‌
ಜರ್ಮನಿಯಲ್ಲಿ ರಾಹುಲ್‌ ಗಾಂಧಿ ಸುಳ್ಳು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಅವರು ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಆರೋಪಿಸಿದ್ದಾರೆ. ನಮ್ಮ ಸಂಸ್ಕೃತಿಯ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕ ಭಾರತದ ಚಿತ್ರಣವನ್ನು ರಾಹುಲ್‌ ಹಾಳು ಮಾಡಿದ್ದಾರೆ. ರಾಹುಲ್‌ ಮಾತಿಗೆ ಯಾವ ಸಾಕ್ಷಿ ಅಥವಾ ಡೇಟಾ ಇರಲಿಲ್ಲ. ಬರಿ ಸುಳ್ಳು ಮಾಹಿತಿಯೇ ಇತ್ತು ಎಂದು ಪಾತ್ರ ಟೀಕಿಸಿದ್ದಾರೆ. ತಮ್ಮ ಹೇಳಿಕೆ ಕುರಿತು ಅವರು ಸ್ಪಷ್ಟನೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next