ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಮಾಡಿದ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಒಲಿಂಪಿಕ್ ಪದಕ ವಿಜೇತರೊಂದಿಗೆ ನಾಲ್ಕನೇ ಸಾಲಿನಲ್ಲಿ ಕುಳಿತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಗುರಿಯಾಗಿವೆ.
ಒಂದು ದಶಕದ ಬಳಿಕ ಇದೇ ಮೊದಲ ಬಾರಿಗೆ ಪ್ರತಿಪಕ್ಷದ ನಾಯಕರೊಬ್ಬರು ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಹಾಜರಾಗಿದ್ದಾರೆ. ನಾಲ್ಕನೇ ಸಾಲಿನಲ್ಲಿ ಭಾರತದ ಹಾಕಿ ತಂಡದ ಗುರ್ಜಂತ್ ಸಿಂಗ್ ಅವರ ಪಕ್ಕದಲ್ಲಿ ರಾಹುಲ್ ಗಾಂಧಿ ಕುಳಿತಿದ್ದರು.
ಮುಂದಿನ ಸಾಲುಗಳಲ್ಲಿ ಒಲಿಂಪಿಕ್ ಪದಕ ವಿಜೇತ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ರಂತವರು ಕುಳಿತಿದ್ದರು. ಒಲಿಂಪಿಕ್-ಕಂಚಿನ ವಿಜೇತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪಿಆರ್ ಶ್ರೀಜೇಶ್ ಸೇರಿದಂತೆ ತಂಡದ ಸದಸ್ಯರು ಕೂಡ ರಾಹುಲ್ ಗಾಂಧಿಗಿಂತ ಮುಂದೆ ಕುಳಿತಿದ್ದರು.
ಶಿಷ್ಟಾಚಾರದ ಪ್ರಕಾರ, ಲೋಕಸಭೆಯ ವಿಪಕ್ಷ ನಾಯಕನ ಸ್ಥಾನವು ಕ್ಯಾಬಿನೆಟ್ ಸಚಿವರಿಗೆ ಸಮನಾಗಿದೆ. ಯಾವಾಗಲೂ ಮುಂದಿನ ಸಾಲಿನಲ್ಲಿ ಆಸನವನ್ನು ನಿಗದಿಪಡಿಸಲಾಗುತ್ತದೆ. ಮುಂದಿನ ಸಾಲಿನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಶಿವರಾಜ್ ಸಿಂಗ್ ಚೌಹಾಣ್, ಅಮಿತ್ ಶಾ ಮತ್ತು ಎಸ್ ಜೈಶಂಕರ್ ಕುಳಿತಿದ್ದರು.
ಸಾಮಾಜಿಕ ತಾಣದಲ್ಲಿ ಫೋಟೋ ಮತ್ತು ವಿಡಿಯೋ ವೈರಲ್ ಆಗಿದ್ದು.ಕಾಂಗ್ರೆಸ್ ಕಾರ್ಯಕರ್ತರು, ”ರಾಹುಲ್ ಗಾಂಧಿ ಅವರನ್ನು ಕಡೆಗಣಿಸಲಾಗಿದೆ. ಮುಂದೆ ಅವರು ಪ್ರಧಾನಿಯಾಗಿ ಧ್ವಜಾರೋಹಣ ಮಾಡಲಿದ್ದಾರೆ” ಎಂದೂ ಬರೆದಿದ್ದಾರೆ.