ರಾಯಚೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯನ್ನು ತಾಲೂಕಿನ ತುಂಗಭದ್ರಾ ಸೇತುವೆ ಬಳಿ ವಿಜೃಂಭಣೆಯಿಂದ ಬರ ಮಾಡಿಕೊಳ್ಳಲಾಯಿತು.
ಪಾದಯಾತ್ರೆ ಸ್ವಾಗತಕ್ಕೆ ಜಿಲ್ಲಾ ಕಾಂಗ್ರೆಸ್ ಭರದ ಸಿದ್ದತೆ ಮಾಡಿಕೊಂಡಿತ್ತು. ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಜನ ತಾಲೂಕಿನ ತುಂಗಭದ್ರಾ ಸೇತುವೆ ಬಳಿ ಪಕ್ಷದ ಮುಖಂಡರು ಕಾರ್ಯಕರ್ತರು ರಾಹುಲ್ ಗಾಂಧಿಗಾಗಿ ಬೆಳಗಿನ ಜಾವದಿಂದಲೇ ಕಾದು ಕುಳಿತಿದ್ದರು. ಬೆಳಗ್ಗೆ 7.30 ಶುರುವಾಗಬೇಕಾದ ಯಾತ್ರೆ 8.30 ದಾಟಿದರೂ ಶುರುವಾಗಲಿಲ್ಲ. ಇದರಿಂದ ಬೆಳಗಿನ ಜಾವದಿಂದು ಕಾದು ಕುಳಿತಿದ್ದವರಿಗೆ ಬೇಸರವಾಯಿತು. ಚೆಂಡೆ, ಡೊಳ್ಳು, ಕೋಲಾಟ ಸೇರಿದಂತೆ ವಿವಿಧ ವಾದ್ಯ ಮೇಳಗಳಿಂದ ಅದ್ದೂರಿ ಸ್ವಾಗತ ಕೋರಲಾಯಿತು.
ಇದನ್ನೂ ಓದಿ:ಅಂಕಪಟ್ಟಿ ವಿಳಂಬ: ಉನ್ನತ ಶಿಕ್ಷಣ-ಉದ್ಯೋಗಕ್ಕೆ ಕುತ್ತು;ಅಂಕಪಟ್ಟಿಗಾಗಿ ವಿದ್ಯಾರ್ಥಿಗಳ ಗೋಳಾಟ
ಮಂತ್ರಾಲಯದ ಹೊರವಲಯದಲ್ಲಿ ವಾಸ್ತವ್ಯ ಹೂಡಿದ್ದ ರಾಹುಲ್ ಗಾಂಧಿ ಶುಕ್ರವಾರ ಬೆಳಗ್ಗೆ 6.30 ಗಂಟೆ ಸುಮಾರಿಗೆ ಯಾತ್ರೆ ಆರಂಭಿಸಿದರು. ಅಷ್ಟೊತ್ತಿಗಾಗಲೇ ತುಂಗಭದ್ರಾ ಸೇತುವೆ ಬಳಿ ಜನಸ್ತೋಮ ನೆರೆದಿತ್ತು. ರಾಜ್ಯ ಕಾಂಗ್ರೆಸ್ ನಾಯಕರು ಸೇತುವೆ ಬಳಿ ಕಾಯುತ್ತ ನಿಂತಿದ್ದರು. ಕಾರ್ಯಕರ್ತರು ಪಕ್ಷದ ಧ್ವಜಗಳನ್ನು, ರಾಹುಲ್ ಗಾಂಧಿ ಭಾವಚಿತ್ರ, ಕೈ ಚಿಹ್ನೆಗಳನ್ನು ಹಿಡಿದು ನಿಂತಿದ್ದರು.
ಆಂಧ್ರದ ಮಾಧವರಂನಿಂದ ರಾಯಚೂರುವರೆಗೆ ಪ್ರತಿ ಗ್ರಾಮಗಳಲ್ಲಿ ಪೊಲೀಸರು ಚೆಕ್ ಪೋಸ್ಟ್ ಗಳನ್ನು ಅಳವಡಿಸಿ, ಬೆಳಗ್ಗೆಯಿಂದ ವಾಹನ ಸಂಚಾರ ತಡೆಯುತ್ತಿದ್ದ ದೃಶ್ಯಗಳು ಕಂಡುಬಂತು.