ಮುಂಬಯಿ : ಕೇಂದ್ರ ಸರಕಾರ ಚಳಿಗಾಲದ ಸಂಸತ್ ಅಧಿವೇಶನ ಕರೆಯುವುದನ್ನು ವಿಳಂಬಿಸುತ್ತಿದ್ದು ಅದನ್ನು ಬುಡಮೇಲು ಮಾಡುವ ಷಡ್ಯಂತ್ರ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಉತ್ತರವೆಂಬಂತೆ ಬಿಜೆಪಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಸಂಸತ್ ಹಾಜರಿ ದಾಖಲೆಯನ್ನು ಪ್ರಶ್ನಿಸಿದೆ.
“ಸಂಸತ್ತಿನ ಬಗ್ಗೆ ಕಾಂಗ್ರೆಸ್‌ಗೆ ಇರುವ ಬದ್ಧತೆ ನನಗೆ ನಿಜಕ್ಕೂ ಅಚ್ಚರಿ ಉಂಟು ಮಾಡುವಂತಿದೆ. ಸಂಸತ್ ಕಲಾಪಗಳು ನಡೆಯುತ್ತಿರುವಾಗ ರಾಹುಲ್ ಗಾಂಧಿ ಅವುಗಳಲ್ಲಿ ಹಾಜರಾದದ್ದು ಎಷ್ಟು ? ಎಂದು ನಾನು ಪ್ರಶ್ನಿಸಲು ಬಯಸುತ್ತೇನೆ’ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.
ವಿಧಾನಸಭಾ ಚುನಾವಣೆಗಳ ದಿನಾಂಕಗಳನ್ನು ತಪ್ಪಿಸಿ ಸಂಸತ್ ಕಲಾಪ ದಿನಾಂಕ ನಿರ್ಧರಿಸುವುದು ಹಿಂದಿನಿಂದಲೂ ಬಂದ ವಾಡಿಕೆ. ಈ ಸಲವೂ ನಾವದನ್ನು ಪಾಲಿಸಿದ್ದೇವೆ; ಹಾಗಾಗಿ ಈ ಬಾರಿಯ ಚಳಿಗಾಲದ ಸಂಸತ್ ಅಧಿವೇಶನ ಡಿಸೆಂಬರ್ ಅಂತ್ಯದಲ್ಲಿ (ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆಗಳ ಬಳಿಕ) ನಡಯಲಿದೆ ಎಂದವರು ಹೇಳಿದರು.
ಕೇಂದ್ರ ಸರಕಾರ ಸಂಸತ್ತಿನ ಚಳಿಗಾಲದ ಅಧಿವೇಶವನ್ನು ಬುಡಮೇಲು ಮಾಡುವ ಹುನ್ನಾರ ಹೊಂದಿದೆ ಎಂದು ಕಾಂಗ್ರೆಸ್ ಟೀಕಿಸಿತ್ತು.
ಯಾವುದೇ ವಿಧಾನಸಭಾ ಚುನಾವಣೆಗಳು ಇಲ್ಲದೇ ಇರುವ ಸಂದರ್ಭದಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಸಾಮಾನ್ಯವಾಗಿ ನವೆಂಬರ್ 3ನೇ ವಾರದಿಂದ ಡಿಸೆಂಬರ್ 3ನೇ ವಾರದ ವರೆಗೆ ನಡೆಸುವುದು ರೂಢಿ.