ತುಮಕೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಭಾರತ್ ಜೋಡೋ ಯಾತ್ರೆ ಮಾಡಲು ಬಂದಿದ್ದಾರೋ ಅಥವಾ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ರನ್ನು ಜೋಡಿಸಲು ಬಂದಿದ್ದಾರೋ ಗೊತ್ತಿಲ್ಲ ಎಂದು ಸಚಿವ ಬೈರತಿ ಬಸವರಾಜು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಎಲ್ಲೆಲ್ಲಿ ಓಡಾಟ ಮಾಡುತ್ತಾರೋ ಅಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಅನೇಕ ಭಾಗ್ಯಗಳನ್ನು ಘೋಷಿಸಿದ್ದರೂ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಈಗಲೂ ಅದೇ ಆಗಲಿದೆ ಎಂದು ಭವಿಷ್ಯ ನುಡಿದ ಅವರು, ರಾಹುಲ್‌ಗಾಂಧಿ ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುವುದಿಲ್ಲ. ಬದಲಾಗಿ ಬಿಜೆಪಿಗೆ ಹೆಚ್ಚು ಲಾಭವಾಗಲಿದೆ ಎಂದರು.
ರಾಜ್ಯ ಗುತ್ತಿಗೆದಾರರ ಸಂಘದ ಕೆಂಪಣ್ಣ ಅವರಿಗೆ ಯಾವುದೇ ರೀತಿಯ ಗುತ್ತಿಗೆದಾರರ ಲೈಸೆನ್ಸ್ ಇಲ್ಲ, ಅವರು ಗುತ್ತಿಗೆದಾರರೇ ಅಲ್ಲ. ಅವರು ಯಾವುದೇ ಕಾಮಗಾರಿಯ ಗುತ್ತಿಗೆಯನ್ನೇ ಪಡೆದಿಲ್ಲ, ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಅವರ ಮೂಲಕ ಹೇಳಿಕೆ ನೀಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತ್ ಜೋಡೋ ಬದಲು ಕಾಂಗ್ರೆಸ್ ಜೋಡೋ ಮಾಡಬೇಕಿತ್ತು. ದೇಶವನ್ನು ಒಡೆದವರಿಂದ ಯಾವ ಜೋಡೋ ನಿರೀಕ್ಷಿಸಲು ಸಾಧ್ಯವಿದೆ. ಜೋಡೋ ಮಾಡಲು ಎಲ್ಲಿ ಒಡಕು ಮೂಡಿದೆ? ಮೊದಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಜೋಡಿಸಲಿ. ಆ ಮೇಲೆ ಭಾರತ್ ಜೋಡೋ ಮಾಡಲಿ.
-ಸಿ.ಸಿ. ಪಾಟೀಲ್, ಲೋಕೋಪಯೋಗಿ ಸಚಿವ