ರಾಯಚೂರು: ಭಾರತ್ ಜೋಡೋ ಯಾತ್ರೆ ಗುರುವಾರ ಸಂಜೆ ಮಂತ್ರಾಲಯ ತಲುಪಿದ್ದು, ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ರಾಯರ ದರ್ಶನ ಪಡೆದ ಗಾಂಧಿ ವಂಶದ ಮೊದಲ ಕುಡಿ ಎನ್ನುವುದು ವಿಶೇಷವಾಗಿತ್ತು.
ಮಠದ ಆಡಳಿತಾಧಿಕಾರಿಗಳು ಹೂವಿನ ಹಾರ ಹಾಕಿ ಬರಮಾಡಿಕೊಂಡರೆ, ವಿದ್ಯಾಪೀಠದ ಅಧ್ಯಾಪಕರು ಮಂತ್ರೋಚ್ಛಾರ ಮಾಡುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು. ಗುರುವಾರ ಸಂಜೆ ಸಾಂಪ್ರದಾಯಿಕ ಉಡುಗೆಯಾದ ಪಂಚೆ, ಶಲ್ಯ ತೊಟ್ಟು ಆಗಮಿಸಿದ ರಾಹುಲ್, ಮೊದಲಿಗೆ ಮಂಚಾಲಮ್ಮ ದೇವಿಗೆ ಮಂಗಳಾರತಿ ಮಾಡಿ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ರಾಯರ ಮೂಲ ಬೃಂದಾವನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಈ ವೇಳೆ ಶ್ರೀ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಾಹುಲ್ ಗಾಂಧಿ ಅವರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಜತೆಗೆ ಪೂಜ್ಯಾಯ ರಾಘವೇಂದ್ರಾಯ ಮಂತ್ರವನ್ನು ರಾಹುಲ್ ಗಾಂಧಿ ಅವರಿಂದ ಹೇಳಿಸಿದರು. ಬಳಿಕ ಪೇಟ ತೋಡಿಸಿ ಆಶೀರ್ವದಿಸಿದರು. ನಂತರ ಶ್ರೀಗಳ ಜತೆ ಕೆಲ ಕಾಲ ಉಭಯ ಕುಶಲೋಪರಿ ನಡೆಸಿದ ರಾಹುಲ್ ಗಾಂಧಿ ಅವರಿಗೆ ಶ್ರೀಗಳು ಮಠದ ಅಭಿವೃದ್ಧಿ ಕಾರ್ಯಗಳ ವಿಡಿಯೋ ತೋರಿಸಿ ವಿವರಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಶ್ರೀಗಳು, ಒಳ್ಳೆಯ ಉದ್ದೇಶಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದು, ಯಶಸ್ವಿಯಾಗಿ ಸಾಗಲಿ. ಮಂತ್ರಾಲಯ ಮಠಕ್ಕೆ ಎಲ್ಲ ಪಕ್ಷಗಳ ನಾಯಕರು ಭೇಟಿ ನೀಡಿದ್ದಾರೆ. ಈಗ ರಾಹುಲ್ ಗಾಂಧಿ ಅವರು ಭೇಟಿ ನೀಡಿದ್ದು ಖುಷಿಯ ವಿಚಾರ ಎಂದರು.
ಗುರುವಾರವಾದ ಕಾರಣ ಮಠಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ರಾಹುಲ್ ಗಾಂಧಿ ಅವರನ್ನು ನೋಡಲು ಜನ ನೂಕುನುಗ್ಗಲು ಮಾಡಿದರು. ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡುವಂತಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್ ಸೇರಿದಂತೆ ಅನೇಕ ಮುಖಂಡರಿದ್ದರು.