ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಶುಕ್ರವಾರ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ರಾಹುಲ್ ಗಾಂಧಿ ಅವರು ವಯನಾಡ್ ಕ್ಷೇತ್ರದಿಂದ ಎರಡನೇ ಬಾರಿ ಕಣಕ್ಕಿಳಿಯಲಿದ್ದಾರೆ.
ಕಳೆದ ಬಾರಿ ಸೋಲು ಅನುಭವಿಸಿದ್ದ ಅಮೇಥಿಯಿಂದ ರಾಹುಲ್ ಗಾಂಧಿ ಅವರ ಹೆಸರು ಪ್ರಕಟಿಸದೇ ಇರುವುದನ್ನು ಬಿಜೆಪಿ ಲೇವಡಿ ಮಾಡಿದ್ದು, ಡರ್ ಗಯಾ ..ಹೆದರಿಕೊಂಡಿದ್ದಾರೆ ಎಂದು ಲೇವಡಿ ಮಾಡಿದೆ.
ಬಿಜೆಪಿ ಐಟಿ ವಿಂಗ್ ಉಸ್ತುವಾರಿ ಅಮಿತ್ ಮಾಳವೀಯ ಅವರು ಎಕ್ಸ್ ಪೋಸ್ಟ್ ಮಾಡಿದ್ದು, ಅಮೇಥಿ ಕ್ಷೇತ್ರದಿಂದ ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೆದರುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
39 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಉತ್ತರ ಪ್ರದೇಶದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸದೇ ಇರುವ ಕುರಿತು ಬಿಜೆಪಿ ವ್ಯಂಗ್ಯವಾಡಿದೆ.
ರಾಹುಲ್ ಗಾಂಧಿ ರಾಯ್ ಬರೇಲಿ ಅಥವಾ ಅಮೇಥಿಯಲ್ಲೂ ಕಣಕ್ಕಿಳಿಯುವ ಬಗ್ಗೆ ಚರ್ಚೆ ನಡೆದಿತ್ತು. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಲೆ ಕಂಡು ಬಂದಿರುವ ಕಾರಣ ರಾಹುಲ್ ಅವರು ಸುರಕ್ಷಿತ ಎನಿಸಿರುವ ವಯನಾಡ್ ನಲ್ಲಿ ಮಾತ್ರ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.
ರಾಹುಲ್ ಕಳೆದ ಚುನಾವಣೆಯಲ್ಲಿ ವಯನಾಡ್ ನಲ್ಲಿ 4,31,770 ಮತಗಳ ಅಂತರದಿಂದ ಗೆದ್ದಿದ್ದರು.