ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಸ್ಟಾರ್ಟ್‌ಅಪ್ ಉದ್ಯಮಿಗಳೊಂದಿಗೆ ಮಾನ್ಯತಾ ಟೆಕ್ ಪಾರ್ಕ್ ಬಳಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ಕೊನೆಗೂ ಅನುಮತಿ ದೊರಕಿದೆ. ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಟೆಕ್ಕಿಗಳ ಜೊತೆ ರಾಹುಲ್‌ಗಾಂಧಿ ಸಂವಾದ ಏರ್ಪಡಿಸಲಾಗಿದೆ. ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಪಕ್ಷಿಗಳ ಉದ್ಯಾನದಲ್ಲಿ ನಡೆಸಲು ಉದ್ದೇಶಿಸಿದೆ.
ಈ ಪಕ್ಷಿಧಾಮದ ಪಕ್ಕದಲ್ಲಿಯೇ ನಾಗವಾರ ಕೆರೆ ಇರುವುದರಿಂದ ಪ್ರತಿದಿನ ಪಕ್ಷಿಗಳು ಅಲ್ಲಿ ವಿಹಾರಕ್ಕೆ ಬರುತ್ತವೆ. ಹೀಗಾಗಿ, ಆ ಪ್ರದೇಶದಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸುವುದರಿಂದ ಶಬ್ದಮಾಲಿನ್ಯ ಆಗಲಿದ್ದು, ಪಕ್ಷಿಗಳಿಗೆ ಕಿರಿಕಿರಿ ಉಂಟಾಗುತ್ತದೆ.
ಇದು ಆ ಪ್ರದೇಶದ ನೈಸರ್ಗಿಕ ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಎಂದು ನಾಗವಾರ ಸುತ್ತಮುತ್ತಲಿನ ನಿವಾಸಿಗಳು ಹಾಗೂ ರಾಜ್ಯ ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ನೀಡಿ, ರಾಹುಲ್‌ಗಾಂಧಿಯವರ ಸಂವಾದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದರು.
ಚುನಾವಣಾ ಆಯೋಗವು ಆ ಪ್ರದೇಶದ ಬಗ್ಗೆ ವರದಿ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸಂವಾದ ಸ್ಥಳ ಗೊಂದಲದ ಗೂಡಾಗಿತ್ತು. ಆಯೋಗದ ಸೂಚನೆಯಂತೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಂದ ವರದಿ ತರಿಸಿಕೊಂಡ ಆಯುಕ್ತ ಎನ್. ಮಂಜುನಾಥ ಪ್ರಸಾದ್, ಆ ವರದಿ ಪ್ರಕಾರ ರಾಜೀವ್‌ಗಾಂಧಿ ಸಂವಾದಕ್ಕೆ ಅನುಮತಿ ನೀಡಲಾಗಿದೆ.
ಮುಖ್ಯ ಚುನಾವಣಾಧಿಕಾರಿ ಎನ್. ಸಂಜೀವ್ ಕುಮಾರ್ ಅವರಿಗೆ ಮಂಜುನಾಥ್ ಪ್ರಸಾದ್ ನೀಡಿರುವ ಪ್ರತಿಕ್ರಿಯೆಯಲ್ಲಿ, “ಮಾನ್ಯತಾ ಟೆಕ್‌ಪಾರ್ಕ್ ಬಳಿ ಇರುವ ಪಕ್ಷಿ ಉದ್ಯಾನದ ಆವರಣದಲ್ಲಿ ಸಂವಾದ ನಡೆಸಲು ಅನುಮತಿ ಕೋರಿ ಯಾವುದೇ ಮನವಿಗಳು ತಮಗೆ ಬಂದಿಲ್ಲ. ಹಾಗೂ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಲಿ ಅಥವಾ ಸಹಾಯಕ ಚುನಾವಣಾಧಿಕಾರಿಯಾಗಲಿ ಯಾವುದೇ ರೀತಿಯ ಅನುಮತಿಯನ್ನೂ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಇದರಂತೆ ರಾಹುಲ್‌ಗಾಂಧಿ ಮಾರ್ಚ್ 18ರಂದು ಈಗಾಗಲೇ ನಿಗದಿಯಾದ ಸ್ಥಳದಲ್ಲಿ ಸ್ಟಾರ್ಟ್‌ಅಪ್ ಉದ್ಯೋಗಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಇದಕ್ಕೂ ಮುನ್ನ ಕಲಬುರಗಿಗೆ ಆಗಮಿಸಲಿದ್ದು, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪರ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.