Advertisement

ಎಸ್‌ಸಿ, ಎಸ್‌ಟಿ ಮೀಸಲು ಶೀಘ್ರ ಜಾರಿಯಾಗಲಿ: ರಾಹುಲ್‌ ಗಾಂಧಿ

07:57 PM Oct 15, 2022 | Team Udayavani |

ಬಳ್ಳಾರಿ: ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಅತಿ ಶೀಘ್ರ ಜಾರಿಯಾಗಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಒತ್ತಾಯಿಸಿದ್ದಾರೆ.

Advertisement

ಭಾರತ್‌ ಜೋಡೋ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ನಾಗಮೋಹನ್‌ ದಾಸ್‌ ಅವರ ಸಮಿತಿ ರಚಿಸಿದ್ದೇವೆ. ಆ ಸಮಿತಿಯು ಎಸ್‌ಟಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7.5ರಷ್ಟು ಏರಿಕೆ ಮಾಡಲು, ಎಸ್‌ಸಿ ಸಮುದಾಯದ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಏರಿಕೆ ಮಾಡಲು ಶಿಫಾರಸು ನೀಡಿತ್ತು. ಬಿಜೆಪಿ ಸರ್ಕಾರ ಇದನ್ನು ಅತಿ ಶೀಘ್ರ ಜಾರಿಗೊಳಿಸಿ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಇದೆ. ರಾಜ್ಯ ಸರ್ಕಾರ ಯಾವುದೇ ಸಬೂಬು ಹೇಳಬಾರದು. ಇದನ್ನು ಜಾರಿಗೆ ತರಲೇಬೇಕು ಎಂದು ಹೇಳಿದರು.

ಈ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಿರೋಧಿಯಾಗಿದೆ. ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಮಾಣ ಶೇ.50ರಷ್ಟು ಹೆಚ್ಚಾಗಿದೆ. ಈ ವರ್ಗದ ಜನರ ಅಭಿವೃದ್ಧಿಗೆ ಸಿಗಬೇಕಿದ್ದ ಸುಮಾರು 8 ಸಾವಿರ ಕೋಟಿ ರೂ. ಹಣವನ್ನು ಬೇರೆ ಕಾರ್ಯಕ್ಕೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಆರ್ಟಿಕಲ್‌ 371 ವಿಶೇಷ ಸ್ಥಾನಮಾನ ನೀಡಲು ನಿರಾಕರಿಸಿತ್ತು. ವಾಜಪೇಯಿ ಹಾಗೂ ಅಡ್ವಾಣಿ ಅವರು ನಿರಾಕರಿಸಿದ್ದರು. ನಿಮ್ಮ ಸಂಕಷ್ಟ ಅರಿತು ಕಾಂಗ್ರೆಸ್‌ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ನೀಡಿದ್ದೆವು. ಇದರ ಪರಿಣಾಮವಾಗಿ ಈ ಭಾಗದ ಸಾವಿರಾರು ಮಂದಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಅವಕಾಶ ಸಿಕ್ಕಿದ್ದು, ಸಾವಿರಾರು ಕೋಟಿ ವಿಶೇಷ ಅನುದಾನ ಸಿಕ್ಕಿದೆ ಎಂದು ತಿಳಿಸಿದರು.

Advertisement

ರಾಜ್ಯದಲ್ಲಿ 40 ಪರ್ಸೆಂಟ್‌ ಸರ್ಕಾರವಿದೆ. ನೀವು ಪೊಲೀಸ್‌ ಇಲಾಖೆ ಸೇರಬೇಕಾದರೆ, 80 ಲಕ್ಷ ರೂ. ಲಂಚ ನೀಡಬೇಕು. ಹಣವಿದ್ದರೆ ಸರ್ಕಾರಿ ಹುದ್ದೆ ಖರೀದಿಸಬಹುದು. ಹಣವಿಲ್ಲದಿದ್ದರೆ ಜೀವನಪೂರ್ತಿ ನಿರುದ್ಯೋಗಿಗಳಾಗಿರುತ್ತೀರಿ. ಸಹಕಾರಿ ಬ್ಯಾಂಕುಗಳಲ್ಲಿ, ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲಿ ಹಗರಣ ನಡೆಯುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ 40 ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂದು ಬಿರುದು ನೀಡಲಾಗಿದೆ. ಏನೇ ಕೆಲಸ ಆಗಬೇಕಾದರೂ 40 ಪರ್ಸೆಂಟ್‌ ಕಮಿಷನ್‌ ನೀಡಬೇಕಾಗಿದೆ ಎಂದು ದೂರಿದರು.

ಭಾರತ್‌ ಜೋಡೋ ಯಾತ್ರೆ ನಿರುದ್ಯೋಗ ವಿರುದ್ಧ ಧ್ವನಿ ಎತ್ತಲು ಆರಂಭಿಸಲಾಗಿದೆ. ನಿರುದ್ಯೋಗ, ದ್ವೇಷದ ಜತೆಗೆ ಬೆಲೆ ಏರಿಕೆ ಮೂಲಕ ನಿಮ್ಮ ಬದುಕು ದುಸ್ಥರವಾಗಿದೆ. ಪದಾರ್ಥಗಳ ಬೆಲೆ ಗಗನಕ್ಕೇರಿದ್ದು, ಇದು ನಿಲ್ಲುವುದಿಲ್ಲ. ಪ್ರಧಾನಮಂತ್ರಿಗಳು ಅಧಿಕಾರಕ್ಕೆ ಬರುವ ಮುನ್ನ ತಮ್ಮ ಭಾಷಣದಲ್ಲಿ ಅಡುಗೆ ಅನಿಲದ ಸಿಲಿಂಡರ್‌ 400 ರೂ. ಇದೆ. ಇದರಿಂದ ದೇಶದ ಮಹಿಳೆಯರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದ್ದರು. ಇಂದು ಅದೇ ಸಿಲಿಂಡರ್‌ 1000 ರೂ. ಆಗಿದೆ. ಈಗ ಪ್ರಧಾನಿಗಳು ನಮ್ಮ ಮಹಿಳೆಯರು ಏನು ಮಾಡಬೇಕು ಎಂದು ಹೇಳುತ್ತಿಲ್ಲ. ಇಂಧನ ತೈಲ ಬೆಲೆ ಐತಿಹಾಸಿಕ ಏರಿಕೆ ಆಗಿದೆ. ನಿರುದ್ಯೋಗ ಮತ್ತು ಬೆಲೆ ಏರಿಕೆ ಮಧ್ಯೆ ಸಿಕ್ಕಿ ನರಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಯಾತ್ರೆಯಲ್ಲಿ ರೈತರನ್ನು ಭೇಟಿಯಾಗುತ್ತಿದ್ದು, ರೈತರ ಪರಿಸ್ಥಿತಿ ಕೇಳುತ್ತಿದ್ದೇನೆ. ಅವರು ಕೃಷಿಗೆ ಎಷ್ಟು ಹಣ ಹಾಕುತ್ತಾರೆ, ಅದರಿಂದ ಎಷ್ಟು ಗಳಿಸುತ್ತಾರೆಂದು ಕೇಳುತ್ತೇನೆ. ಆಗ ಅವರು ಆರ್ಥಿಕ ಸಹಾಯ ವಿಲ್ಲದೆ ರೈತರು ಬದುಕಲು ಸಾಧ್ಯವಿಲ್ಲ ಎಂಬ ಉತ್ತರ ನೀಡುತ್ತಾರೆ. ರೈತರಿಗೆ ನೆರವಾಗುವ ಬದಲು, ದೇಶದ ಇತಿಹಾಸದಲ್ಲಿ ರೈತ ಶೇ.5ರಷ್ಟು ರಸಗೊಬ್ಬರಕ್ಕೆ, ಶೇ.12ರಷ್ಟು ಟ್ರ್ಯಾಕ್ಟರ್‌ಗಳ ಮೇಲೆ, ಶೇ.18ರಷ್ಟು ತೆರಿಗೆಯನ್ನು ಕೀಟನಾಶಕಗಳಿಗೆ ನೀಡಬೇಕಿದೆ. ರೈತರು ತಮಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದಿದ್ದು, ಇದು ರಾಜ್ಯ ಹಾಗೂ ದೇಶದ ರೈತರು ಎದುರಿಸುತ್ತಿರುವ ಸಮಸ್ಯೆ ಎಂದು ಹೇಳಿದರು.

ನನ್ನ ಕುಟುಂಬಕ್ಕೂ ಬಳ್ಳಾರಿ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ನನ್ನ ತಾಯಿ ಸೋನಿಯಾ ಗಾಂಧಿ ಇಲ್ಲಿಂದ ಸ್ಪರ್ಧಿಸಿ ಇಲ್ಲಿನ ಜನರ ಬೆಂಬಲದೊಂದಿಗೆ ಆಯ್ಕೆಯಾಗಿದ್ದರು. ನನ್ನ ಅಜ್ಜಿ ಇಂದಿರಾ ಗಾಂಧಿ ಅವರು ಚಿಕ್ಕಮಗಳೂರಿನಿಂದ ಗೆದ್ದು ಬಂದಿದ್ದರು. ನಾನಿದನ್ನು ಮರೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ನನ್ನ ಜತೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಧನ್ಯವಾದ ಅರ್ಪಿಸುತ್ತೇನೆ. -ರಾಹುಲ್‌ಗಾಂಧಿ ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next