Advertisement

ರಾಹುಲ್‌ “ಮಧ್ಯಪ್ರವೇಶ’ಹೇಳಿಕೆ ವಿರುದ್ಧ ಬಿಜೆಪಿ ಗುಡುಗು

07:57 PM Mar 07, 2023 | Team Udayavani |

ನವದೆಹಲಿ:”ಭಾರತದ ವಿಚಾರದಲ್ಲಿ ಯುರೋಪ್‌ ಮತ್ತು ಅಮೆರಿಕ ಮಧ್ಯಪ್ರವೇಶಿಸುತ್ತಿಲ್ಲ ಏಕೆ’?
ಲಂಡನ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೇಳಿರುವ ಈ ಪ್ರಶ್ನೆಯಿಂದ ಬಿಜೆಪಿ ಬೆಂಕಿಯಾಗಿದೆ. ಯುಕೆಯಲ್ಲಿ ರಾಹುಲ್‌ ಮಾಡಿರುವ ಭಾಷಣವು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಮತ್ತೂಂದು ಸುತ್ತಿನ ವಾಕ್‌ವಾರ್‌ಗೆ ವೇದಿಕೆ ಕಲ್ಪಿಸಿದೆ.

Advertisement

ಸೋಮವಾರ ರಾತ್ರಿ ಬ್ರಿಟನ್‌ ಸಂಸತ್‌ನ ಗ್ರ್ಯಾಂಡ್‌ ಕಮಿಟಿ ಕೊಠಡಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮತ್ತು ಭಾರತೀಯ ಸಮುದಾಯದವರೊಂದಿಗೆ ಮಾತನಾಡಿದ್ದ ರಾಹುಲ್‌, “ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ಪ್ರಜಾಸತ್ತೆಯ ರಕ್ಷಕರು ಎಂದು ಹೇಳಿಕೊಳ್ಳುವ ಯುರೋಪ್‌ ಮತ್ತು ಅಮೆರಿಕ ಏಕೆ ಜಾಣಕಿವುಡನಂತೆ ವರ್ತಿಸುತ್ತಿವೆ’ ಎಂದಿದ್ದರು. ಜತೆಗೆ, ಭಾರತದ ಪ್ರಜಾಪ್ರಭುತ್ವಕ್ಕೆ ಹಾನಿ ಉಂಟುಮಾಡಲಾಗುತ್ತಿದೆ, ಸಂಸತ್‌ನಲ್ಲಿ ಪ್ರತಿಪಕ್ಷಗಳ ನಾಯಕರು ಮಾತನಾಡಬಾರದೆಂದು ಮೈಕ್ರೋಫೋನ್‌ಗಳನ್ನೇ ಆಫ್ ಮಾಡಲಾಗುತ್ತದೆ ಎಂದೂ ಆರೋಪಿಸಿದ್ದರು.

ರಾಹುಲ್‌ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಕೆಂಡಾಮಂಡಲವಾದ ಬಿಜೆಪಿ, “ಭಾರತದ ವಿಚಾರದಲ್ಲಿ ಅಮೆರಿಕ ಮತ್ತು ಯುರೋಪ್‌ ಮಧ್ಯಪ್ರವೇಶಿಸಬೇಕು ಎಂದು ಹೇಳುವ ಮೂಲಕ ರಾಹುಲ್‌ ಗಾಂಧಿ ಅವರು, “ಭಾರತದ ಆಂತರಿಕ ವಿಚಾರದಲ್ಲಿ ವಿದೇಶಿ ಶಕ್ತಿಗಳು ಹಸ್ತಕ್ಷೇಪ ಮಾಡುವಂತಿಲ್ಲ’ ಎಂಬ ಸರ್ವಸಮ್ಮತ ನಿರ್ಣಯದ ವಿರುದ್ಧ ಹೋಗಿದ್ದಾರೆ. ಅವರು ಸಂಪೂರ್ಣವಾಗಿ ತನ್ನ ಗುಲಾಮರ ಮತ್ತು ಅರಾಜಕತಾವಾದಿ ಶಕ್ತಿಗಳ ಮೂಲಕ ಮಾವೋವಾದಿಗಳ ಚಿಂತನೆಯ ಹಿಡಿತದಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿದೆ’ ಎಂದು ವಾಗ್ಧಾಳಿ ನಡೆಸಿದೆ.

ಕೇಂದ್ರ ಸಚಿವರಾದ ರವಿಶಂಕರ್‌ ಪ್ರಸಾದ್‌, ಕಿರಣ್‌ ರಿಜಿಜು, ಅನುರಾಗ್‌ ಠಾಕೂರ್‌, ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ರಾಹುಲ್‌ ವಿರುದ್ಧ ಸತತ ವಾಗ್ಧಾಳಿ ನಡೆಸಿದ್ದಾರೆ.

ಮತ್ತೊಂದೆಡೆ, ರಾಹುಲ್‌ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್‌, “ರಾಹುಲ್‌ ನೀಡಿರುವ ಹೇಳಿಕೆಯನ್ನು ಬಿಜೆಪಿ ತಿರುಚಿ, ತನಗೆ ಬೇಕಾದಂತೆ ಸುಳ್ಳುಗಳನ್ನು ಸೃಷ್ಟಿಸುತ್ತಿದೆ’ ಎಂದಿದೆ. ಜತೆಗೆ, “ಸಚಿವ ರವಿಶಂಕರ್‌ ಪ್ರಸಾದ್‌ ಅವರು ಮರುನೇಮಕಕ್ಕಾಗಿ ಬಾಸ್‌ಗಳನ್ನು ಖುಷಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಅಮೆರಿಕದಲ್ಲಿ “ಅಬ್‌ಕಿ ಬಾರ್‌, ಟ್ರಂಪ್‌ ಸರ್ಕಾರ್‌’ ಎಂದು ಘೋಷಣೆ ಕೂಗಿದ್ದನ್ನು ಅವರು ಮರೆತಿರುವಂತಿದೆ’ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ತಿರುಗೇಟು ನೀಡಿದ್ದಾರೆ.

Advertisement

ರಾಹುಲ್‌ ಹೇಳಿದ್ದೇನು?
– ಶಾಶ್ವತವಾಗಿ ಅಧಿಕಾರದಲ್ಲಿರುತ್ತೇವೆ ಎಂದು ಬಿಜೆಪಿ ನಂಬಿದೆ.
– ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ಪ್ರತಿಪಕ್ಷಗಳ ನಾಯಕರಿಗೆ ಸಂಸತ್‌ನಲ್ಲಿ ಧ್ವನಿಯೆತ್ತಲೂ ಬಿಡುತ್ತಿಲ್ಲ.
– ಭಾರತದ ನ್ಯಾಯಾಂಗ, ಸಂಸತ್‌, ಚುನಾವಣಾ ಆಯೋಗ ಸೇರಿದಂತೆ ಎಲ್ಲ ಸಂಸ್ಥೆಗಳ ಮೇಲೂ ಒತ್ತಡ ಹಾಕಿ, ಅವುಗಳನ್ನು ನಿಯಂತ್ರಣದಲ್ಲಿಡಲಾಗಿದೆ.
– ಭಾರತದಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಪ್ರಜಾಪ್ರಭುತ್ವದ ರಕ್ಷಕರು ಎಂದು ಹೇಳಿಕೊಳ್ಳುವ ಅಮೆರಿಕ, ಯುರೋಪ್‌ ಏಕೆ ಮಾತನಾಡುತ್ತಿಲ್ಲ?
– ಆರೆಸ್ಸೆಸ್‌ ಎನ್ನುವುದು ಮೂಲಭೂತವಾದಿ, ಫ್ಯಾಸಿಸ್ಟ್‌ ಸಂಘಟನೆ. ಅದು ಈಜಿಪ್ಟ್ನ ಮುಸ್ಲಿಂ ಬ್ರದರ್‌ಹುಡ್‌ ಇದ್ದಂತೆ.
– ಉಕ್ರೇನ್‌ನಲ್ಲಿ ರಷ್ಯಾ ಏನು ಮಾಡಿತೋ, ಅದನ್ನೇ ಅರುಣಾಚಲ ಪ್ರದೇಶ ಮತ್ತು ಲಡಾಖ್‌ನಲ್ಲಿ ಚೀನಾ ಮಾಡಲು ಹೊರಟಿದೆ. ಈ ಬಗ್ಗೆ ಎಚ್ಚರಿಸಿದರೂ ಸರ್ಕಾರ ನಿರಾಕರಿಸುತ್ತಿದೆ.
– ಎಲ್ಲ ನೆರೆರಾಷ್ಟ್ರಗಳೊಂದಿಗೂ ನಾವು ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು. ಆದರೆ, ಭಯೋತ್ಪಾದಕರನ್ನು ಪೋಷಿಸುವುದನ್ನು ಪಾಕಿಸ್ತಾನ ಮುಂದುವರಿಸಿದರೆ ಮಾತ್ರ “ಉತ್ತಮ ಬಾಂಧವ್ಯ’ ಅಸಾಧ್ಯ.

ರಾಹುಲ್‌ರಿಂದ ದೇಶಕ್ಕೆ ಅವಮಾನ: ಸಚಿವ ಪ್ರಸಾದ್‌
ರಾಹುಲ್‌ ಹೇಳಿಕೆ ಖಂಡಿಸಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, “ರಾಹುಲ್‌ ಗಾಂಧಿ ಅವರು ಯುಕೆ ಸಂಸತ್‌ನ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ಅಲ್ಲದೇ, ಅವರು ನಾಚಿಕೆಗೇಡಿನ ಸುಳ್ಳುಗಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಅವರ ಈ ನಡೆಗೆ ತಕ್ಕ ಪ್ರತ್ಯುತ್ತರ ನೀಡಲೇಬೇಕು’ ಎಂದಿದ್ದಾರೆ. ಕಾಂಗ್ರೆಸ್‌ ನಾಯಕನು ವಿದೇಶಿ ನೆಲದಲ್ಲಿ ನಿಂತು ಭಾರತದ ಪ್ರಜಾಸತ್ತೆ, ರಾಜಕೀಯ, ಸಂಸತ್‌, ನ್ಯಾಯಾಂಗ ವ್ಯವಸ್ಥೆ ಮತ್ತು ವ್ಯೂಹಾತ್ಮಕ ಭದ್ರತೆಗೆ ಅವಮಾನ ಮಾಡಿದ್ದಾರೆ. ರಾಹುಲ್‌ ಅವರ ಸಂಪೂರ್ಣ ಬೇಜವಾಬ್ದಾರಿ ಹೇಳಿಕೆಗಳಿಗೆ ಸಂಬಂಧಿಸಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರು ಸ್ಪಷ್ಟನೆ ನೀಡಬೇಕು ಎಂದೂ ರವಿಶಂಕರ್‌ ಒತ್ತಾಯಿಸಿದ್ದಾರೆ.

ರಾಹುಲ್‌ ಗಾಂಧಿ ಅವರು ಎಲ್ಲೇ ಹೋದರೂ ವಿವಾದಗಳ ಬಿರುಗಾಳಿ ಎಬ್ಬಿಸುತ್ತಾರೆ. ವಿದೇಶಿ ಏಜೆನ್ಸಿಗಳು, ವಿದೇಶಿ ಚಾನೆಲ್‌ಗ‌ಳು ಅಥವಾ ವಿದೇಶಿ ನೆಲವಾಗಲೀ, ಅವಕಾಶ ಸಿಕ್ಕಿದಲ್ಲೆಲ್ಲ ಭಾರತದ ವರ್ಚಸ್ಸನ್ನು ಹಾಳು ಮಾಡುತ್ತಾರೆ.
– ಅನುರಾಗ್‌ ಠಾಕೂರ್‌, ಕೇಂದ್ರ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next