ನವದೆಹಲಿ: ಏಪ್ರಿಲ್ 26ರಂದು ಕರ್ನಾಟಕ, ಕೇರಳ ಸೇರಿದಂತೆ ಹಲವೆಡೆ 2ನೇ ಹಂತದ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಶಶಿ ತರೂರ್, ಅರುಣ್ ಗೋವಿಲ್, ಬಿಜೆಪಿಯ ಹೇಮಾ ಮಾಲಿನಿ, ಓಂ ಬಿರ್ಲಾ, ಗಜೇಂದ್ರ ಸಿಂಗ್ ಶೇಖಾವತ್ ಸೇರಿದಂತೆ ಹಲವು ಮಂದಿ ಪ್ರಮುಖರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇದನ್ನೂ ಓದಿ:Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
ಒಟ್ಟು ಏಳು ಹಂತಗಳಲ್ಲಿ ದೇಶದಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಏಪ್ರಿಲ್ 19ರಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸೇರಿದಂತೆ 102 ಸ್ಥಾನಗಳಿಗೆ ಚುನಾವಣೆ ನಡೆದಿತ್ತು, ಶೇ.65.5ರಷ್ಟು ಮತದಾನವಾಗಿತ್ತು.
2ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಕೇರಳದ ಎಲ್ಲಾ 20 ಕ್ಷೇತ್ರಗಳಲ್ಲಿ, ಕರ್ನಾಟಕದ 14, ರಾಜಸ್ಥಾನದ 13, ಮಹಾರಾಷ್ಟ್ರದ 8, ಉತ್ತರಪ್ರದೇಶ 8, ಮಧ್ಯಪ್ರದೇಶದ 7, ಅಸ್ಸಾಂನ 5, ಬಿಹಾರದ 5, ಚತ್ತೀಸ್ ಗಢ್ 03, ಪಶ್ಚಿಮಬಂಗಾಳ 3, ಮಣಿಪುರ 1, ತ್ರಿಪುರಾ 1 ಮತ್ತು ಜಮ್ಮು-ಕಾಶ್ಮೀರದ 1 ಸ್ಥಾನಕ್ಕಾಗಿ ಮತದಾನ ನಡೆಯಲಿದೆ.
1210 ಅಭ್ಯರ್ಥಿಗಳು: 2ನೇ ಹಂತದಲ್ಲಿ 1210 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಯ 2ನೇ ಹಂತದಲ್ಲಿ 13 ರಾಜ್ಯಗಳ 97 ಲೋಕಸಭೆ ಕ್ಷೇತ್ರಗಳಿಗೆ ಶೇ.66ರಷ್ಟು ಮತದಾನ ನಡೆದಿತ್ತು. ಮೊದಲ ಹಂತದಲ್ಲಿ 21 ರಾಜ್ಯಗಳ 102 ಕ್ಷೇತ್ರಗಳಲ್ಲಿ ಶೇ.65 ಹಕ್ಕು ಚಲಾವಣೆಯಾಗಿತ್ತು. ಪ್ರಮುಖರು ಕಣದಲ್ಲಿ: ಶಶಿ ತರೂರ್, ಸಚಿವ ರಾಜೀವ್ ಚಂದ್ರಶೇಖರ್, ರಾಹುಲ್ ಗಾಂಧಿ, ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಪ್ರಮುಖರ ಭವಿಷ್ಯ ನಿರ್ಧಾರವಾಗಲಿದೆ.
ರಾಹುಲ್ ಗಾಂಧಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಎರಡನೇ ಬಾರಿ ಗೆಲುವಿಗೆ ಎದುರು ನೋಡುತ್ತಿದ್ದಾರೆ. ಗಾಂಧಿ ವಿರುದ್ಧ ಸಿಪಿಐನ ಅನ್ನಿ ರಾಜಾ, ಬಿಜೆಪಿಯ ಸುರೇಂದ್ರನ್ ಸ್ಪರ್ಧಿಸುತ್ತಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರ ಸಚಿವ ಶಶಿ ತರೂರ್ ತಿರುವನಂತಪುರಂನಿಂದ ಸ್ಪರ್ಧಿಸುತ್ತಿದ್ದು, ನಾಲ್ಕನೇ ಬಾರಿಯ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿ ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್ ಮತ್ತು ಸಿಪಿಐನ ಪಿ.ರವೀಂದ್ರನ್ ಅಖಾಡದಲ್ಲಿದ್ದಾರೆ.