ಹೊಸದಿಲ್ಲಿ : ಇದೇ ಮೇ 12ರಂದು ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕದ ಕೃಷಿ ರಂಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನು ಎಂಬ ಬಗ್ಗೆ ರಿಪೋರ್ಟ್ ಕಾರ್ಡನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಗುರುವಾರ ಟ್ವಿಟರ್‌ನಲ್ಲಿ ನೀಡಿದ್ದಾರೆ. ಈ ರಿಪೋರ್ಟ್ ಕಾರ್ಡಲ್ಲಿ ಪ್ರಧಾನಿ ಮೋದಿಗೆ ರಾಹುಲ್ ಕಳಪೆ ‘F’ ಗ್ರೇಡ್ ಕೊಟ್ಟಿದ್ದಾರೆ.
ರಾಹುಲ್ ಟ್ವಿಟರ್‌ನಲ್ಲಿ ಹೀಗೆ ಬರೆದಿದ್ದಾರೆ : ಪ್ರಧಾನಿ ಮೋದಿ ಅವರ ರಿಪೋರ್ಟ್ ಕಾರ್ಡ್ – ರಾಜ್ಯ ಕರ್ನಾಟಕ; ವಿಷಯ: ಕೃಷಿ.
1. ಕರ್ನಾಟಕ ಸರಕಾರ ಮಂಜೂರು ಮಾಡಿರುವ 8,500 ಕೋಟಿ ರೂ. ಕೃಷಿ ಸಾಲ ಮನ್ನಾಗೆ ಮೋದಿ ಕೊಡುಗೆ : ಶೂನ್ಯ ರೂಪಾಯಿ.
2. ಪ್ರಧಾನಿಯವರ ಕೃಷಿ ವಿಮೆ ಯೋಜನೆ: ರೈತರು ಸಂಕಷ್ಟದಲ್ಲಿ; ಖಾಸಗಿ ವಿಮಾ ಕಂಪೆನಿಗಳಿಗೆ ಬಂಪರ್ ಲಾಭ.
3. ಕರ್ನಾಟಕ ರೈತರಿಗೆ ಎಂಎಸ್‌ಪಿ + 50% ಇಲ್ಲ : ಗ್ರೇಡ್ ಎಫ್.
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ತಮ್ಮ ಮೂರನೇ ಸುತ್ತಿನ ಪ್ರಚಾರಾಭಿಯಾನಕ್ಕೆ ತೊಡಗಿ ಮುಂದಿನ ಕೆಲವೇ ದಿನಗಳಲ್ಲಿ 12 ರಾಲಿಗಳನ್ನು ನಡೆಸಿಕೊಡಲಿರುವಂತೆಯೇ ರಾಹುಲ್ ಅವರಿಂದ ಈ “ರಿಪೋರ್ಟ್ ಕಾರ್ಡ್’ ಟ್ವಿಟರ್ ದಾಳಿ ನಡೆದಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವಾರು ಮುಂಚೂಣಿ ಬಿಜೆಪಿ ನಾಯಕರು ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಚುನಾವಣಾ ರಾಲಿಗಳನ್ನು ನಡೆಸಿಕೊಡಲಿದ್ದು ಇದು ಕಾಂಗ್ರೆಸ್ ಮೇಲಿನ ಅತೀ ದೊಡ್ಡ ಪ್ರಹಾರವಾಗಲಿದೆ ಎಂದು ತಿಳಿಯಲಾಗಿದೆ.