ಹೊಸದಿಲ್ಲಿ: ವಿಪಕ್ಷಗಳ ಬಣ ಇಂಡಿಯಾ ಬ್ಲಾಕ್ ನ ವರ್ಚುವಲ್ ಸಭೆಯು ಶನಿವಾರ ನಡೆದಿದೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ ಮುಂತಾದವರು ವರ್ಚುವಲ್ ಮೀಟ್ ನ ಭಾಗವಾಗಿದ್ದರು.
ಮೂಲಗಳ ಪ್ರಕಾರ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಇಂಡಿಯಾ ಬ್ಲಾಕ್ ನ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದರು. ಆದರೆ ರಾಹುಲ್ ಇದಕ್ಕೆ ಒಪ್ಪಿಗೆ ನೀಡಿಲ್ಲ.
ಸಂಚಾಲಕ ಹುದ್ದೆಗೆ ನಿತೀಶ್ ಅವರ ಹೆಸರನ್ನು ಪ್ರಸ್ತಾಪಿಸಲಾಯಿಉ. ಈ ವೇಳೆ ಬಿಹಾರದ ತಮ್ಮ ಸಹೋದ್ಯೋಗಿ ಲಾಲು ಯಾದವ್ ಅವರು ಹೆಚ್ಚು ಹಿರಿಯರಾಗಿರುವ ಕಾರಣ ಅವರೇ ಉತ್ತಮ ಆಯ್ಕೆಯಾಗುತ್ತಾರೆ ಎಂದು ನಿತೀಶ್ ಕುಮಾರ್ ಹೇಳಿದರು. ಒಕ್ಕೂಟದಲ್ಲಿ ಸಂಚಾಲಕರು ಪ್ರತ್ಯೇಕ ಹುದ್ದೆಯಾಗಿದ್ದು, ಅಧ್ಯಕ್ಷರಿಗಿಂತ ಸ್ವಲ್ಪ ಕೆಳಗಿನ ಸ್ಥಾನಮಾನ ಹೊಂದಿರಲಿದೆ.
ತಾವು ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಕಾರಣ ಮತ್ತು ಭಾರತ್ ಜೋಡೋ ನ್ಯಾಯ್ ಯಾತ್ರೆ ಭಾನುವಾರ ಪ್ರಾರಂಭವಾಗುವುದರಿಂದ ತಮಗೆ ಅಧ್ಯಕ್ಷ ಸ್ಥಾನ ಬೇಡ ಎಂದು ರಾಹುಲ್ ಹೇಳಿದರು. ಅಲ್ಲದೆ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಿದರು.
ಖರ್ಗೆ ಅವರ ಹೆಸರನ್ನು ಸೋನಿಯಾ ಗಾಂಧಿ ಕೂಡಾ ಬೆಂಬಲಿಸಿದ್ದಾರೆ. ಇಂಡಿಯಾ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ಬಹುತೇಕ ಅಂತಿಮವಾಗಲಿದೆ ಎಂದು ವರದಿಯಾಗಿದೆ.