ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಷ್ಟ್ರೀಯ ನಾಯಕರ ಮೂಲಕ ಕಸರತ್ತು ಆರಂಭಿಸಿವೆ. ಆಗಸ್ಟ್ 12 ರಿಂದ ಮೂರು ದಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಆಗಮಿಸುತ್ತಿದ್ದು, ಅದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ರಾಯಚೂರಿಗೆ ಆಗಮಿಸಿ ಹೈದರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ಮೊಳಗಿಸಲು ಮುಂದಾಗಿದ್ದಾರೆ.
ಆ.12ರಂದು ರಾಯಚೂರಿನಲ್ಲಿ ನಡೆಯುವ ಹೈದರಾಬಾದ್ ಕರ್ನಾಟಕ ಭಾಗದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಯುವ ಕಾಂಗ್ರೆಸ್ ಘಟಕವು ಸಿಂಧನೂರಿನಿಂದ ರಾಯಚೂರುವರೆಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ “ಕಿಸಾನ್ ಆಕ್ರೋಶ್ ಯಾತ್ರೆ’ ಆರಂಭಿಸಿದ್ದಾರೆ. ಆ.12ರಂದು ರಾಹುಲ್ ಗಾಂಧಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೈ-ಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ನಿರಂತರ ಹೋರಾಟ ನಡೆದಾಗ 2008ರಲ್ಲಿ ರಾಹುಲ್ ಗಾಂಧಿ ಹೈದರಾಬಾದ್ ಕರ್ನಾಟಕಕ್ಕೆ ಆಗಮಿಸಿ ನೀಡಿದ್ದ ಭರವಸೆಯಂತೆ ಯುಪಿಎ ಸರ್ಕಾರ ಸಂವಿಧಾನದ 371(ಜೆ) ಕಲಂಗೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ಒದಗಿಸಿತ್ತು. ಅದನ್ನು ಈಗ ಆ ಭಾಗದ ಆರು ಜಿಲ್ಲೆಗಳ ಜನರಿಗೆ ನೆನಪಿಸಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡುವಂತೆ ಜನರ ಸೆಳೆಯಲು ಈ ಸಮಾವೇಶವನ್ನು ವೇದಿಕೆಯಾಗಿ ಬಳಸಿಕೊಳ್ಳಲಾಗುತ್ತಿದೆ.
4 ಲಕ್ಷ ಜನರ ಸೇರಿಸುವ ಉದ್ದೇಶ: ಹೈ-ಕ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಿಂದ ರಾಯಚೂರು ಸಮಾವೇಶಕ್ಕೆ ಸುಮಾರು 4 ಲಕ್ಷ ಕಾರ್ಯಕರ್ತರನ್ನು ಸೇರಿಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ. ಉತ್ತರ ಕರ್ನಾಟಕ ಜವಾಬ್ದಾರಿ ಹೊತ್ತುಕೊಂಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಈಗಾಗಲೇ ಎಲ್ಲ ಜಿಲ್ಲೆಗಳ ಮುಖಂಡರನ್ನು ಭೇಟಿ ಮಾಡಿ, ಸಮಾವೇಶದ ಯಶಸ್ವಿಗೆ ಕಾರ್ಯಕರ್ತರನ್ನು ಸೇರಿಸುವ ಕುರಿತಂತೆ ನಿರಂತರ ಓಡಾಟ ನಡೆಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕೂಡಾ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿಯುತವಾಗಿದೆ ಎಂಬುದನ್ನು ಈ ಸಮಾವೇಶದ ಮೂಲಕ ತೋರಿಸುವ ಲೆಕ್ಕಾಚಾರ ನಡೆಸಿದ್ದಾರೆ. ಹೀಗಾಗಿ ರಾಯಚೂರಿನಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ರಾಹುಲ್ ಗಾಂಧಿ ಮಾತು ಕೊಟ್ಟಂತೆ ಹೈದರಾಬಾದ್- ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿದ್ದಾರೆ. ನಾವು ಆ ಭಾಗದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಸಲು ನಿರ್ಧರಿಸಿರುವುದರಿಂದ ಕಾಂಗ್ರೆಸ್ ಕೊಟ್ಟ ಮಾತು ಉಳಿಸಿಕೊಂಡಿದೆ ಎಂದು ಜನರಿಗೆ ತಿಳಿಸಲು ಬರುತ್ತಿದ್ದಾರೆ. ಹೈ-ಕ ಭಾಗದ ಆರು ಜಿಲ್ಲೆಗಳ ಸುಮಾರು 4 ಲಕ್ಷ ಜನರನ್ನು ಸೇರಿಸುವ ಉದ್ದೇಶ ಇದೆ.
ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ