Advertisement

ವಿಫ‌ಲರಾಗಿದ್ದೀರಿ; ಒಪ್ಪಿಕೊಳ್ಳಿ ಮೋದಿಜೀ: ರಾಹುಲ್‌ ಟೀಕೆ

06:35 AM Oct 06, 2017 | Team Udayavani |

ಅಮೇಠಿ: “ನಮ್ಮ (ಸರಕಾರ) ಬಗ್ಗೆ ನಿರಾಶೆ ವ್ಯಕ್ತಪಡಿಸದಿದ್ದರೆ ಕೆಲವರಿಗೆ ನಿದ್ದೆಯೇ ಬರುವುದಿಲ್ಲ,’ ಎಂದು ಪ್ರತಿಪಕ್ಷಗಳನ್ನು ಕುಟುಕಿದ್ದ ಪ್ರಧಾನಿ ಮೋದಿ ಅವರ ಹೇಳಿಕೆ, ಅಮೇಥಿಯಲ್ಲಿರುವ  ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಕೆರಳಿಸಿದೆ. “ನಮ್ಮನ್ನು ನಿರಾಶಾವಾದಿಗಳು ಎಂದು ಕರೆಯುವ ಬದಲು, ನಿಮ್ಮ ವೈಫ‌ಲ್ಯಗಳನ್ನು ಎಂದು ಒಪ್ಪಿಕೊಳ್ಳಿ,’ ಎನ್ನುವ ಮೂಲಕ ರಾಹುಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ದೇಶದ ಜಿಡಿಪಿ ಕುಸಿತವನ್ನೇ ಮುಂದಿರಿಸಿಕೊಂಡು ಪದೇ ಪದೆ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ವಾಗ್ಧಾಳಿ ನಡೆಸುವ ವಿಪಕ್ಷಗಳ ಮೇಲೆ ಬುಧವಾರ ಹರಿಹಾಯ್ದಿದ್ದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಭಾಷಣದುದ್ದಕ್ಕೂ “ನಿರಾಶಾವಾದಿಗಳು’ ಎಂಬ ಪದ ಪ್ರಯೋಗಿಸುವ ಮೂಲಕ ಪ್ರತಿಪಕ್ಷಗಳನ್ನು ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದರು.

ಮೂರು ದಿನಗಳ ಅಮೇಥಿ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ, ಪ್ರವಾಸದ ಎರಡನೇ ದಿನವಾದ ಗುರುವಾರ, ಪ್ರಧಾನಿಯವರ ವ್ಯಂಗ್ಯ ಟೀಕೆಗಳಿಗೆ ತೀಕ್ಷ್ಣವಾಗೇ ಪ್ರತಿಕ್ರಿಯಿಸಿದ್ದಾರೆ. “ಪ್ರಧಾನಿ ಮೋದಿ ತಾವು ದೇಶದ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫ‌ಲರಾಗಿದ್ದಾರೆ. ಆ ಹುಳುಕು ಮುಚ್ಚಿಕೊಳ್ಳಲು ಅವರು ಆಗಾಗ ಪ್ರತಿಪಕ್ಷಗಳನ್ನು ಹೀಗಳೆಯುತ್ತಾರೆ. ಹೀಗೆ ಮಾಡುವ ಬದಲು ತಮ್ಮ ವೈಫ‌ಲ್ಯವನ್ನು ಪ್ರಧಾನಿ ನೇರವಾಗಿ ಒಪ್ಪಿಕೊಳ್ಳಲಿ,’ ಎಂದಿದ್ದಾರೆ.

ಪ್ರಧಾನಿಗೆ ರಾಹುಲ್‌ ಸಲಹೆ: ಇದೇ ವೇಳೆ ಕೆಂದ್ರ ಎನ್‌ಡಿಎ ಸರಕಾರಕ್ಕೆ ಕೆಲ ಸಲಹೆಗಳನ್ನು ನೀಡಿರುವ ಕಾಂಗ್ರೆಸ್‌ ಉಪಾಧ್ಯಕ್ಷ, “ದೇಶದಲ್ಲಿ ರೈತರ ಆತ್ಮಹತ್ಯೆ ಮತ್ತು ನಿರುದ್ಯೋಗದಂಥ ಸಮಸ್ಯೆಗಳು ತಾರಕಕ್ಕೇರಿದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಕೇಂದ್ರ ಸರಕಾರ ಗಮನಹರಿಸಬೇಕು’ ಎಂದರು. 

“ದೇಶದ ಯುವ ಜನರ ಕೈಗಳಿಗೆ ಉದ್ಯೋಗ ನೀಡುವಲ್ಲಿ ಕೇಂದ್ರ ಸರಕಾರ ವಿಫ‌ಲವಾಗಿದೆ. ಪಕ್ಕದ ರಾಷ್ಟ್ರ ಚೀನಾ ಪ್ರತಿ ದಿನ 50 ಸಾವಿರ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಭಾರತದಲ್ಲಿ ಪ್ರತಿ ದಿನ 30 ಸಾವಿರ ಮಂದಿ ದ್ಯೋಗ ಅರಸಿ ಅಲೆಯುತ್ತಾರೆ. ಆದರೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ರೂಪು ಗೊಂಡಿರುವ “ಮೇಕ್‌ ಇನ್‌ ಇಂಡಿಯಾ’, “ಸ್ಟಾರ್ಟ್‌ಅಪ್‌ ಇಂಡಿಯಾ’ ರೀತಿಯ ಮಹತ್ವಾಕಾಂಕ್ಷಿ ಯೋಜನೆಗಳಿಂದ ಸೃಷ್ಟಿಯಾಗಿರುವುದು ಕೇವಲ 450 ಉದ್ಯೋಗಗಳು,’ ಎಂದು ರಾಹುಲ್‌ ಟೀಕಿಸಿದರು.

Advertisement

ಯೋಜನೆಗಳ ಪುನಾರಂಭ
“ಕೇಂದ್ರ ಎನ್‌ಡಿಎ ಸರಕಾರ ಮತ್ತ ಉತ್ತರ ಪ್ರದೇಶ ಬಿಜೆಪಿ ಸರಕಾರಗಳೆರಡೂ ಹೊಸ ಯೋಜನೆಗಳನ್ನೇನೂ ಜಾರಿಗೆ ತರುತ್ತಿಲ್ಲ. ಬದಲಿಗೆ ಈ ಹಿಂದೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಘೋಷಿಸಿದ್ದ ಯೋಜನೆಗಳನ್ನೇ ಪುನರಾರಂಭಿಸುತ್ತಿವೆ,’ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.  “ಹಿಂದೆ ನಾವು ಆರಂಭಿಸಿದ ಯೋಜನೆಗಳನ್ನೇ ನನ್ನ ಬಿಜೆಪಿಯ ಗೆಳೆಯರು ಪುನರಾರಂಭಿಸುತ್ತಿದ್ದಾರೆ. ಹಾಗೇ ಈ ಎಲ್ಲ ಯೋಜನೆಗಳು ನಾನು ಅಮೇಥಿ ಜನರಿಗಾಗಿ ರೂಪಿಸಿದ ಯೋಜನೆಗಳು ಎಂದು ಹೇಳಲು ಸಂತೋಷವಾಗುತ್ತಿದೆ,’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next