ಹೊಸದಿಲ್ಲಿ : ಫೇಕ್ ನ್ಯೂಸ್ ನಿಯಂತ್ರಿಸುವ ಬಗ್ಗೆ ಪತ್ರಕರ್ತರಿಗೆ ನೀಡಲಾಗಿದ್ದ ಮಾರ್ಗದರ್ಶಿ ಸೂತ್ರಗಳನ್ನು ಹಿಂಪಡೆದ ಪ್ರಧಾನಿ ನರೇಂದ್ರ ಮೋದಿ ಅವರ “ಯೂ ಟರ್ನ್” ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
”ಫೇಕ್ ನ್ಯೂಸ್ ನಿಯಂತ್ರಣದ ಬಗ್ಗೆ ಆಕ್ರೋಶ ಹೆಚ್ಚುತ್ತಿರುವುದನ್ನು ಗಮನಿಸಿದ ಪ್ರಧಾನಿ ಮೋದಿ ಅವರು ತಮ್ಮ ಆದೇಶವನ್ನು ಹಿಂಪಡೆವ ಮೂಲಕ ಯೂ ಟರ್ನ್ ಮಾಡಿದ್ದಾರೆ. ಈ ಮೂಲಕ ಮೋದಿ ಅವರಲ್ಲಿ ನಿಯಂತ್ರಣದ ನಷ್ಟವಾಗಿರುವುದು ಮತ್ತು ಆತಂಕ ಆವರಿಸಿಕೊಂಡಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ” ಎಂದು ರಾಹುಲ್ ಲೇವಡಿ ಮಾಡಿದ್ದಾರೆ.
2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಹ್ಯಾಷ್‌ಟ್ಯಾಗ್ ಬಸ್ ಏಕ್ ಸಾಲ್ ಜತೆಗೆ ರಾಹುಲ್ ಟ್ವೀಟ್ ಮಾಡಿದ್ದಾರೆ.
ಫೇಕ್ ನ್ಯೂಸ್‌ಗೆ ಅಂಕುಶ ಹಾಕುವ ಮಾರ್ಗದರ್ಶಿ ಸೂತ್ರಗಳನ್ನು ಒಳಗೊಂಡ ಪತ್ರಿಕಾ ಪ್ರಕಟನೆ ಜಾರಿಗೊಂಡ ಕೆಲವೇ ತಾಸುಗಳಲ್ಲಿ ಅದನ್ನು ಹಿಂಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದರು. ಫೇಕ್ ನ್ಯೂಸ್ ನಿರ್ಬಂಧಿಸುವ ವಿಷಯವನ್ನು ಭಾರತದ ಪ್ರಸ್ ಕೌನ್ಸಿಲ್ ಮಾತ್ರವೇ ನಿಭಾಯಿಸಬೇಕಾಗುತ್ತದೆ ಎಂದವರು ಹೇಳಿದ್ದರು.
Related Articles
ವಾರ್ತಾ ಮತ್ತು ಪ್ರಸಾರ ಸಚಿವಾಲಯ ನಿನ್ನೆ ಸೋಮವಾರ ಫೇಕ್ ನ್ಯೂಸ್‌ಗಳನ್ನು ನಿಯಂತ್ರಿಸುವ ವಿಚಾರದಲ್ಲಿ ಅಕ್ರೆಡಿಟೇಶನ್ (ಮಾನ್ಯತೆ ನೀಡಲ್ಪಟ್ಟ) ಪತ್ರಕರ್ತರಿಗೆ ಮಾರ್ಗದರ್ಶಿ ಸೂತ್ರಗಳನ್ನು ಜಾರಿ ಮಾಡಿತ್ತು.
ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈಚಿನ ದಿನಗಳಲ್ಲಿ ಫೇಕ್ ನ್ಯೂಸ್ ಪ್ರಕರಣಗಳು ಒಂದೇ ಸಮನೆ ಹೆಚ್ಚುತ್ತಿರುವುದನ್ನು ಗಮನಿಸಿ ಸರಕಾರ ಮಾನ್ಯತೆ ಪಡೆದ ಪತ್ರಕರ್ತರ ಮಾರ್ಗದರ್ಶಿ ಸೂತ್ರಗಳಿಗೆ ತಿದ್ದುಪಡಿಯನ್ನು ತರಲು ಬಯಸಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತನ್ನ ಪತ್ರಿಕಾ ಪ್ರಕಟನೆಯಲ್ಲಿ ಹೇಳಿತ್ತು.
ಫೇಕ್ ನ್ಯೂಸ್ ದೃಢಪಟ್ಟಲ್ಲಿ ಮೊದಲ ಉಲ್ಲಂಘನೆಗಾಗಿ ಅಕ್ರೆಡಿಟೇಶನ್ ಪತ್ರಕರ್ತರಿಗೆ ಆರು ತಿಂಗಳ ಅಮಾನತು ಶಿಕ್ಷೆ, ಎರಡನೇ ಉಲ್ಲಂಘನೆಗೆ ಒಂದು ವರ್ಷ ಅಮಾನತು ಮತ್ತು 3ನೇ ಉಲ್ಲಂಘನೆಗೆ ಶಾಶ್ವತ ಅಕ್ರೆಡಿಟೇಶನ್ ರದ್ದತಿಯ ಶಿಕ್ಷೆಯನ್ನು ಪ್ರಕಟಿಸಲಾಗಿತ್ತು.