ಲಕ್ನೋ: ಉತ್ತರಪ್ರದೇಶದ ಹಾಥ್ರಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ್ದ 19 ವರ್ಷದ ಯುವತಿಯ ಪ್ರಕರಣ ದೇಶಾದ್ಯಂತ ಆಕ್ರೋಶದ ಕಿಚ್ಚು ಹಬ್ಬಿಸಿರುವ ನಡುವೆಯೇ ಸಂತ್ರಸ್ತೆ ಯುವತಿಯ ಕುಟುಂಬದ ಸದಸ್ಯರ ಭೇಟಿಗೆ ತೆರಳಲು ಹೊರಟಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಉತ್ತರಪ್ರದೇಶ ಪೊಲೀಸರ ನಡುವೆ ಹೊಯ್ ಕೈ ನಡೆದಿರುವುದಾಗಿ ವರದಿ ತಿಳಿಸಿದೆ.
ದಿಲ್ಲಿ-ನೋಯ್ಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ, ಪಕ್ಷದ ಕಾರ್ಯಕರ್ತರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ರಾಹುಲ್ ಗಾಂಧಿಯನ್ನು ಅಡ್ಡಗಟ್ಟಿದ್ದರು. ಯಾವ ಉದ್ದೇಶದ ಮೇಲೆ ಅಲ್ಲಿಗೆ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದ್ದು, ಈ ವೇಳೆ ನಡೆದ ಲಾಠಿಚಾರ್ಜ್ ಮತ್ತು ತಳ್ಳಾಟದಿಂದಾಗಿ ರಾಹುಲ್ ಗಾಂಧಿ ಮುಗ್ಗರಿಸಿ ಬಿದ್ದಿರುವುದಾಗಿ ವರದಿ ವಿವರಿಸಿದೆ.
ಹೆಚ್ಚಿನ ಜನ ಗುಂಪುಗೂಡುವಂತಿಲ್ಲ ಎಂಬ ನಿಷೇಧವನ್ನು ಉಲ್ಲಂಘಿಸಿದ್ದರಿಂದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಾನಿಲ್ಲಿ ಶಾಂತಿಯುತವಾಗಿ ನಿಂತಿದ್ದೇನೆ. ಬಳಿಕ ನಾನೊಬ್ಬನೇ ಹೋಗುತ್ತೇನೆ. ಹಾಥ್ರಸ್ ಗೆ ಇಲ್ಲಿಂದ ಒಬ್ಬನೇ ನಡೆದುಕೊಂಡು ಹೋಗುವುದಾಗಿ ರಾಹುಲ್ ಗಾಂಧಿ ಪೊಲೀಸರಿಗೆ ತಿಳಿಸಿದ್ದರು.
ಇದನ್ನೂ ಓದಿ:ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸರ್ಪ್ರೈಸ್ ಅಭ್ಯರ್ಥಿ? ಮಲ್ಲಿಕಾರ್ಜುನ ಖರ್ಗೆ ಸುಳಿವು
Related Articles
ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ದೃಶ್ಯಗಳಲ್ಲಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನು ತಡೆದ ಪೊಲೀಸರು ಹಿಡಿದು ಎಳೆದಾಡುತ್ತಿದ್ದು, ಈ ವೇಳೆ ನಡೆದ ಘರ್ಷಣೆಯಲ್ಲಿ ರಾಹುಲ್ ಗಾಂಧಿ ಕೆಳಕ್ಕೆ ಬಿದ್ದಿದ್ದರು. ನಂತರ ಕಾಂಗ್ರೆಸ್ ಮುಖಂಡರು ನೆರವಿಗೆ ಧಾವಿಸಿದ್ದರು ಎಂದು ವರದಿ ವಿವರಿಸಿದೆ.
ತನ್ನನ್ನೂ ಕೂಡಾ ತಳ್ಳಿರುವುದಾಗಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ. ನನ್ನ ಯಾಕೆ ಬಂಧಿಸಿದ್ದೀರಿ? ಯಾವ ಆಧಾರದ ಮೇಲೆ ಬಂಧಿಸಿದ್ದೀರಿ? ನಾನು ಯಾವ ಕಾನೂನನ್ನು ಉಲ್ಲಂಘಿಸಿದ್ದೇನೆ ಎಂದು ರಾಹುಲ್ ಗಾಂಧಿ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿತ್ತು.
ಅಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ(ಸೆಕ್ಷನ್ 188)ರುವ ಆರೋಪದ ಮೇಲೆ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದರು. ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ್ದ ಸಂತ್ರಸ್ತೆಯ ಕುಟುಂಬದ ಸದಸ್ಯರನ್ನು ಭೇಟಿಯಾಗಲು ರಾಹುಲ್, ಪ್ರಿಯಾಂಕಾ ಲಕ್ನೋಗೆ ತೆರಳಿದ್ದರು. ಆದರೆ ನೋಯ್ಡಾದಲ್ಲಿಯೇ ಗಾಂಧಿ ವಾಹನ ತಡೆದು ನಿಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಕಾರಿನಿಂದ ಇಳಿದು, ಕಾಂಗ್ರೆಸ್ ಕಾರ್ಯಕರ್ತರ ಜತೆ ಕಾಲ್ನಡಿಗೆಯಲ್ಲಿ ತೆರಳಿದ್ದರು. ನಂತರ ಭಾರೀ ಪ್ರಮಾಣದಲ್ಲಿ ಆಗಮಿಸಿದ್ದ ಉತ್ತರಪ್ರದೇಶ ಪೊಲೀಸರು ದಾರಿ ಮಧ್ಯೆಯೇ ತಡೆದು ನಿಲ್ಲಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಗುಡ್ ನ್ಯೂಸ್: ಕೋವಿಡ್ ಸೋಂಕು-ಭಾರತದಲ್ಲಿ 53 ಲಕ್ಷ ಮಂದಿ ಗುಣಮುಖ: ಸಚಿವಾಲಯ