ಕೇಂಬ್ರಿಡ್ಜ್: ಲಂಡನ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬ್ರಿಟನ್‌ನ ಲೇಬರ್ ನಾಯಕ ಜೆರೆಮಿ ಕಾರ್ಬಿನ್‌ರನ್ನು ಭೇಟಿಯಾಗಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಯುಕೆ ವಿಪಕ್ಷ ನಾಯಕನಾಗಿರುವ ಜೆರೆಮಿ ಅವರು ಭಾರತ ವಿರೋಧಿ ನಿಲುವು ಹೊಂದಿದವರು ಎಂದು ಆರೋಪಿಸಿರುವ ಬಿಜೆಪಿ, “ರಾಹುಲ್ ಅವರೇ ನೀವು ಎಷ್ಟು ದಿನ ನಿಮ್ಮದೇ ದೇಶದ ವಿರುದ್ಧ ಹೋಗುತ್ತೀರಿ’ ಎಂದು ಪ್ರಶ್ನಿಸಿದೆ.
ಕೇಂದ್ರ ಸಚಿವ ಕಿರಣ್ ರಿಜಿಜು, ಬಿಜೆಪಿ ನಾಯಕ ಕಪಿಲ್ ಮಿಶ್ರಾ ಸೇರಿದಂತೆ ಅನೇ ಕರು ರಾಹುಲ್ ವಿರುದ್ಧ ಕಿಡಿಕಾರಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಇದೇ ಜೆರೆಮಿ ಕಾರ್ಬಿನ್ ಅವರೊಂದಿಗೆ ಪ್ರಧಾನಿ ಮೋದಿ ಅವರಿರುವ ಫೋಟೋವನ್ನು ಟ್ವೀಟ್ ಮಾಡಿ ತಿರುಗೇಟು ನೀಡಿರುವ ಕಾಂಗ್ರೆಸ್, “ಮೋದಿಯವರು ಕೂಡ ಭಾರತ- ವಿರೋಧಿ ನಿಲುವನ್ನು ಬೆಂಬಲಿಸುತ್ತಿದ್ದಾರಾ’ ಎಂದು ಪ್ರಶ್ನಿಸಿದೆ.
ಈ ನಡುವೆ ಕೇಂಬ್ರಿಡ್ಜ್ ವಿವಿಯ ಕಾರ್ಪಸ್ ಕ್ರಿಸ್ಟಿ ಕಾಲೇಜಿನ ಕಾರ್ಯಕ್ರಮದಲ್ಲಿ ರಾಹುಲ್, “ಮೋದಿಯವರು ದೇಶದ ಜನರನ್ನು ಒಗ್ಗೂಡಿಸುವ ಬದಲು ಅವರನ್ನು ಬೇರ್ಪಡಿಸುವ ಮಾತುಗಳನ್ನಾಡುತ್ತಿದ್ದಾರೆ. ಅಭಿಪ್ರಾಯವ್ಯಕ್ತ ಪಡಿಸುವ ಸಂಸ್ಥೆಗಳ ಮೇಲೆ ನಿರಂತರ ದಾಳಿ ಎಸಗಲಾಗುತ್ತಿದೆ’ ಎಂದು ದೂರಿದ್ದಾರೆ.