ನವದೆಹಲಿ: ದೇಶದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರ ವಿದೇಶಗಳಿಗೆ ಕೋವಿಡ್ ಲಸಿಕೆಯನ್ನು ರಫ್ತು ಮಾಡುತ್ತಿರುವ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ(ಏಪ್ರಿಲ್ 09) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಾನೇನು ಹಠಕ್ಕೆ ಕುಳಿತಿಲ್ಲ, ಮಾತನಾಡಲೂ ಏನು ಉಳಿದಿಲ್ಲ: ಬಿ.ಎಸ್.ಯಡಿಯೂರಪ್ಪ
ದೇಶದ ಜನರನ್ನು ಅಪಾಯಕ್ಕೆ ಸಿಲುಕಿಸಿ, ಕೋವಿಡ್ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡುವುದು ಸರಿಯೇ ಎಂದು ರಾಹುಲ್ ಪ್ರಶ್ನಿಸಿದ್ದಾರೆ. ಲಸಿಕೆ ಕೊರತೆ ತುಂಬಾ ಗಂಭೀರವಾದ ಸಮಸ್ಯೆಯಾಗಿದೆ, ಆ ನಿಟ್ಟಿನಲ್ಲಿ ಇದೊಂದು ಉತ್ಸವ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕೋವಿಡ್ ಲಸಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಯಾವುದೇ ತಾರತಮ್ಯ ಮಾಡದೇ ನೆರವು ನೀಡಬೇಕಾಗಿದೆ. ಅಷ್ಟೇ ಅಲ್ಲ ರಾಜ್ಯಗಳಿಗೆ ಬೇಕಾದ ಹೆಚ್ಚುವರಿ ಲಸಿಕೆಯನ್ನು ನೀಡಬೇಕಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಕೆಲವು ರಾಜ್ಯಗಳು ಹೆಚ್ಚಿನ ಕೋವಿಡ್ ಲಸಿಕೆಗೆ ಬೇಡಿಕೆ ಇಟ್ಟಿವೆ. ಆದರೆ ಲಸಿಕೆ ವಿಚಾರದಲ್ಲಿ ಕೆಲವು ರಾಜ್ಯಗಳು ರಾಜಕೀಯ ಮಾಡುತ್ತಿರುವುದಾಗಿ ಕೇಂದ್ರ ಸರ್ಕಾರ ಆರೋಪಿಸುತ್ತಿದೆ ಎಂದಿರುವ ರಾಹುಲ್, ಲಸಿಕೆ ಎಲ್ಲರಿಗೂ ಲಭ್ಯವಾಗಬೇಕು ಎಂಬುದು ಕಾಂಗ್ರೆಸ್ ಮನವಿಯಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ 9.1 ಕೋಟಿ ಕೋವಿಡ್ ಡೋಸ್ ಗಳು ಬಳಕೆಯಾಗಿದೆ, ಸುಮಾರು 2.4 ಕೋಟಿ ಕೋವಿಡ್ ಲಸಿಕೆ ಸಂಗ್ರಹದಲ್ಲಿದೆ ಮತ್ತು 1.9 ಕೋಟಿ ಲಸಿಕೆ ಸಿದ್ದವಾಗುತ್ತಿದೆ, ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳಿಗೂ ಅಗತ್ಯವಿರುವಷ್ಟು ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಮುನ್ಸೂಚನೆ ನೀಡಿದ್ದಾರೆ.