ಹೊಸದಿಲ್ಲಿ : ಪನಾಮಾ ಪೇಪರ್‌ಗಳಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಪುತ್ರ, ಸಂಸದ ಅಭಿಷೇಕ್ ಸಿಂಗ್ ಅವರ ಹೆಸರು ಕಾಣಿಸಿಕೊಂಡ ಬಗ್ಗೆ ರಮಣ್ ಸಿಂಗ್ ವಿರುದ್ಧ ವಾಕ್ ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು “ಪಾಕ್ ಪ್ರಧಾನಿ ನವಾಜ್ ಷರೀಫ್ ಅವರನ್ನು ಇದೇ ಕಾರಣಕ್ಕೆ ಜೈಲಿಗೆ ಹಾಕಲಾಗಿತ್ತು. ಭಾರತದಲ್ಲಿ ಜೈಲಿಗೆ ಹಾಕುವುದಿರಲಿ, ಯಾವುದೇ ಕ್ರಮ ಅಥವಾ ತನಿಖೆ ಕೂಡ ನಡೆಯುವುದಿಲ್ಲ’ ಎಂದು ಲೇವಡಿ ಮಾಡಿದ್ದಾರೆ.
ಛತ್ತೀಸ್‌ಗಢದ ರಾಜನಂದಗಾಂವ್ ಲೋಕಸಭಾ ಕ್ಷೇತ್ರದಿಂದ ಗೆದ್ದು ಬಂದಿರುವ ರಮಣ್ ಸಿಂಗ್ ಪುತ್ರ ಅಭಿಷೇಕ್ ಸಿಂಗ್ ಅವರಿಗೆ “ಬ್ರಿಟಿಷ್ ವರ್ಜಿನ್ ಐಲ್ಯಾಂಡ್‌ಗಳಲ್ಲಿ ಆಸ್ತಿ ಆಸ್ತಿ ಇದೆ; ವಿರೋಧ ಪಕ್ಷಗಳು ಈ ಬಗ್ಗೆ ತನಿಖೆ ನಡೆಸುವಂತೆ ಸರಕಾರವನ್ನು ಆಗ್ರಹಿಸುತ್ತಾ ಬಂದಿದೆ; ಆದರೆ ಈ ತನಕ ಯಾವುದೇ ಕ್ರಮ ಅಥವಾ ತನಿಖೆ ನಡೆದಿಲ್ಲ” ಎಂದು ರಾಹುಲ್ ಹೇಳಿದರು.
ಈ ವರ್ಷಾಂತ್ಯ ಛತ್ತೀಸ್‌ಗಢ ವಿಧಾನಸಭಾ ಚುನಾವಣೆ ನಡೆಯಲಿದ್ದು ಅದಕ್ಕೆ ಮುನ್ನ ರಾಜ್ಯದ ಮುಖ್ಯಮಂತ್ರಿ ರಮಣ್ ಸಿಂಗ್ ವಿರುದ್ಧ ರಾಹುಲ್ ತಮ್ಮ ವಾಕ್ ದಾಳಿಯನ್ನು ತೀವ್ರಗೊಳಿಸಿದ್ದಾರೆ. ಇಲ್ಲಿ ನೂತನವಾಗಿ ಆರಂಭಿಸಲ್ಪಟ್ಟ ಪಕ್ಷದ ಕಾರ್ಯಾಲಯದ ಉದ್ಘಾಟನೆ ಸಂಬಂಧ ರಾಹುಲ್ ಬಂದಿದ್ದರು.
“ಪಾಕಿಸ್ಥಾನದಲ್ಲಿ ಪನಾಮಾ ಪೇಪರ್ ಹಗರಣದಲ್ಲಿ ಹೆಸರು ಕಾಣಿಸಿಕೊಂಡದ್ದಕ್ಕೆ ಅಲ್ಲಿನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಜೈಲಿಗೆ ಹಾಕಲಾಗಿದೆ. ಆದರೆ ಇಲ್ಲಿ ನಿಮ್ಮ ಪುತ್ರನ ಹೆಸರು ಪನಾಮಾ ಪೇಪರ್‌ಗಳಲ್ಲಿ ಕಾಣಿಸಿಕೊಂಡಾಗ ನೀವು ತನಿಖೆಯನ್ನು ಕೂಡ ನಡೆಸಲು ಮುಂದಾಗಿಲ್ಲ; ಇದು ಬಿಜೆಪಿ ಎನ್‌ಡಿಎ ಚೌಕೀದಾರೀ ವೈಖರಿಯಾಗಿದೆ’ ಎಂದು ರಾಹುಲ್ ಟೀಕಿಸಿದರು.
ರಮಣ್ ಸಿಂಗ್ ಪುತ್ರ, ಸಂಸದ ಅಭಿಷೇಕ್ ಸಿಂಗ್ ಅವರು ತಮ್ಮ ವಿರುದ್ಧ ವಿರೋಧ ಪಕ್ಷಗಳು ಮಾಡಿರುವ ಪನಾಮಾ ಪೇಪರ್ ಹಗರಣವೆಲ್ಲ ಸುಳ್ಳು, ಕುಚೋದ್ಯದ್ದು ಮತ್ತು ರಾಜಕೀಯ ಪ್ರೇತರಿವಾದುದು’ ಎಂದು ಹೇಳಿದ್ದಾರೆ.