Advertisement

BJP ಲೂಟಿ ಹೊಡೆದ ಹಣವನ್ನು ಕಾಂಗ್ರೆಸ್ ಸರ್ಕಾರ ಜನರಿಗೆ ವಾಪಸ್ ನೀಡಲಿದೆ: ರಾಹುಲ್

10:14 PM May 01, 2023 | Team Udayavani |

ಚಾಮರಾಜನಗರ: ಬಿಜೆಪಿ ಸರ್ಕಾರ ಜನರಿಂದ ಲೂಟಿ ಹೊಡೆದಿರುವ ಹಣವನ್ನು , ಕರ್ನಾಟಕ ರಾಜ್ಯದಲ್ಲಿ ಅಧಿಕಾರ ಹಿಡಿಯಲಿರುವ ಕಾಂಗ್ರೆಸ್ ಸರ್ಕಾರ ಜನರಿಗೆ ವಾಪಸ್ ನೀಡಲಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

Advertisement

ನಗರದಲ್ಲಿ ಸೋಮವಾರ ಸಂಜೆ ನಡೆದ, ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಲೆಗಳು ಗಗನಕ್ಕೇರಿವೆ. 400 ರೂ ಇದ್ದ ಅಡುಗೆ ಅನಿಲ ಬೆಲೆ 1100 ರೂ.ಆಗಿದೆ. ಅಡುಗೆ ಎಣ್ಣೆ 200 ರೂ. ಆಗಿದೆ. ಪೆಟ್ರೋಲ್, ಡೀಸೆಲ್ 120 ರೂ. ಆಗಿದೆ.

ದೇಶದ ಇತಿಹಾಸದಲ್ಲಿ ರೈತರ ಮೇಲೆ ಜಿಎಸ್‌ಟಿ ತೆರಿಗೆ ಹಾಕಿದ ಕೀರ್ತಿ ಬಿಜೆಪಿಯದ್ದು. ಈ ಸರ್ಕಾರದ ಅವಧಿಯಲ್ಲಿ 1.5 ಕೋಟಿ ಜನರು ಉದ್ಯೋಗ ಕಳೆದುಕೊಂಡರು. 40 ಕೋಟಿ ಜನರು ಮತ್ತೆ ಬಡತನ ರೇಖೆ ಕೆಳಗೆ ಹೋದರು. 90 ಲಕ್ಷ ಉದ್ದಿಮೆಗಳು ಮುಚ್ಚಿದವು. ಸಾಲದೆಂಬಂತೆ ರಾಜ್ಯ ಬಿಜೆಪಿ ಸರ್ಕಾರ ಎಲ್ಲದರಲ್ಲೂ ಶೇ. 40 ರಷ್ಟು ಕಮಿಷನ್ ಪಡೆದು ಭ್ರಷ್ಟ ಸರ್ಕಾರವಾಗಿದೆ. ಈ ಹಣ ಜನರ ತೆರಿಗೆಯಿಂದ ಲೂಟಿ ಹೊಡೆದ ಹಣ. ಮುಂದೆ ಅಧಿಕಾರಕ್ಕೆ ಬರಲಿರುವ ಕಾಂಗ್ರೆಸ್ ಸರ್ಕಾರ ನಿಮ್ಮ ಹಣವನ್ನು ಗೃಹಲಕ್ಷ್ಮಿ, ಗೃಹಜ್ಯೋತಿ, 10 ಕೆಜಿ ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಪದವೀಧರರಿಗೆ ನಿರುದ್ಯೋಗ ಭತ್ಯೆ ಯೋಜನೆಗಳ ಮೂಲಕ ನಿಮಗೆ ವಾಪಸ್ ನೀಡಲಿದೆ ಎಂದರು.

ರಾಜ್ಯದಲ್ಲಿ ಈಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ದುಡ್ಡಿನಿಂದ ಖರೀದಿ ಮಾಡಿದ ಸರ್ಕಾರ. 5-6 ವರ್ಷದ ಮಗುವಿಗೂ ಇದು 40 ಪರ್ಸೆಂಟ್ ಸರ್ಕಾರ ಎಂದು ಗೊತ್ತಿದೆ. ಏನೇ ಕೆಲಸ ಮಾಡಿದರೂ 40 ಪರ್ಸೆಂಟ್ ಕಮಿಷನ್ ನೀಡಬೇಕು. ಗುತ್ತಿಗೆದಾರರ ಸಂಘದವರೇ ಪ್ರಧಾನಿಗೆ ಪತ್ರ ಬರೆದು, ಕಾಮಗಾರಿಗಳಿಗೆ ಶೇ. 40ರಷ್ಟು ಕಮಿಷನ್ ನೀಡಬೇಕು ಎಂದು ದೂರು ಸಲ್ಲಿಸಿತು. ಮೈಸೂರು ಸ್ಯಾಂಡಲ್ ನಿಗಮದ ಅಧ್ಯಕ್ಷನಾಗಿರುವ ಶಾಸಕನ ಮನೆಯಲ್ಲಿ 8 ಕೋಟಿ ರೂ. ದೊರಕುತ್ತದೆ. ಪೊಲೀಸ್ ಹುದ್ದೆ, ಸಹಾಯಕ ಇಂಜಿನಿಯರ್ ಹುದ್ದೆ ಹಗರಣಗಳ ದೊಡ್ಡ ಪಟ್ಟಿಯೇ ಇದೆ. ಬಿಜೆಪಿ ಶಾಸಕರೊಬ್ಬರು ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ರೂ. ನೀಡಬೇಕು ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಂಥ ವಿಚಾರಗಳ ಬಗ್ಗೆ ಉತ್ತರವನ್ನೇ ನೀಡುವುದಿಲ್ಲ. ಕಾಂಗ್ರೆಸ್ ನನ್ನ ಮೇಲೆ ಆರೋಪ ನಿಂದನೆ ಮಾಡುತ್ತಿದೆ ಎಂದು ಹೇಳುತ್ತಾರೆ. ಸತತವಾಗಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗಳು ಚಕಾರ ಎತ್ತುವುದಿಲ್ಲ. ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ಈ ಆರೋಪಗಳಿಗೆ ಉತ್ತರ ನೀಡಿ. ಏನಾದರೂ ಕ್ರಮ ಕೈಗೊಳ್ಳುತ್ತೀರಾ? ತನಿಖೆ ಮಾಡಿಸುತ್ತೀರಾ? ಎಂದು ಪ್ರಶ್ನಿಸಿದರು.

ಕರ್ನಾಟಕ ನೀಡುವ ಜಿಎಸ್‌ಟಿ ಹಣದಿಂದ ಕರ್ನಾಟಕಕ್ಕೆ ಏನು ಮಾಡಿದ್ದೀರಿ? ಇಲ್ಲಿ ನೆರೆಬಂದಾಗ ನೀವು ನೆರವು ನೀಡಲಿಲ್ಲ. ಮಹಾರಾಷ್ಟ್ರ, ಗೋವಾ, ಕರ್ನಾಟಕ ಜಲ ವಿವಾದದ ಬಗೆಹರಿಸಲು ಏನು ಮಾಡಿದ್ದೀರಿ? ಕರ್ನಾಟಕದಲ್ಲಿ ಅರ್ಧ ಚುನಾವಣಾ ಪ್ರಚಾರ ಮುಗಿಸಿದ್ದೀರಿ. ಈ ಚುನಾವಣಾ ಪ್ರಚಾರದಲ್ಲಿ ಜನರಿಗೆ ಯಾವ ರೀತಿಯ ಯೋಜನೆಗಳನ್ನು ನೀಡುತ್ತೇವೆ ಎಂದು ಹೇಳಿಲ್ಲ. ಜನರಿಗೆ ಏನು ಅನುಕೂಲ ಕಲ್ಪಿಸುತ್ತೀರಿ? ಹೇಳಿ ಎಂದು ಒತ್ತಾಯಿಸಿದರು.

Advertisement

ಗ್ಯಾರಂಟಿ ಯೋಜನೆಗಳಲ್ಲದೇ, ರಾಜ್ಯದ ರೈತರಿಗಾಗಿ ರೈತನಿಧಿ ಯೋಜನೆ ಜಾರಿಗೊಳಿಸಲಾಗುವುದು. ವರ್ಷಕ್ಕೆ 30 ಸಾವಿರ ಕೋಟಿಯಂತೆ, ಐದು ವರ್ಷಗಳಿಗೆ 1.5 ಲಕ್ಷ ಕೋಟಿಯನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ರಾಹುಲ್ ತಿಳಿಸಿದರು.

ಈ ಚುನಾವಣೆ ನಿಮ್ಮ ಹಾಗೂ ನಿಮ್ಮ ಮಕ್ಕಳ ಭವಿಷ್ಯ ನಿರ್ಧರಿಸುವ ಚುನಾವಣೆ. ಶಾಲೆ, ಕಾಲೇಜು, ವಿವಿ ಕುರಿತ ಚುನಾವಣೆ. ಬಿಜೆಪಿಯವರಿಗೆ 40 ರ ಸಂಖ್ಯೆ ಬಗ್ಗೆ ಬಹಳ ಪ್ರೀತಿ. ಹಾಗಾಗಿ ನೀವು ಚುನಾವಣೆಯಲ್ಲಿ 40 ಸೀಟನ್ನು ಮಾತ್ರ ಅವರಿಗೆ ಕೊಡಿ. ಕಾಂಗ್ರೆಸ್‌ಗೆ 150 ಸೀಟು ಕೊಡಿ. ನಮ್ಮ ಅಭ್ಯರ್ಥಿಗಳು ಒಳ್ಳೆಯವರು. ಭ್ರಷ್ಟರಲ್ಲ ಎಂದು ರಾಹುಲ್ ಹೇಳಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮೈಸೂರು ವಿಭಾಗದ ಉಸ್ತುವಾರಿ ರೋಜಿ ಜಾನ್, ಎಂಎಲ್‌ಸಿ ಡಾ. ತಿಮ್ಮಯ್ಯ, ಡಿಸಿಸಿ ಅಧ್ಯಕ್ಷ ಪಿ. ಮರಿಸ್ವಾಮಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಲತಾ ಜತ್ತಿ, ಮಾಜಿ ಸಂಸದ ಶಿವಣ್ಣ, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಮುಖಂಡರಾದ ಸಯ್ಯದ್ ರಫಿ, ಬಿ.ಕೆ. ರವಿಕುಮಾರ್, ಚಿಕ್ಕಮಹದೇವು, ಮಹಮದ್ ಅಸ್ಗರ್, ಗುರುಸ್ವಾಮಿ, ನಾಗಶ್ರೀ ಬ್ರಿಜೇಶ್, ಶಕುಂತಲಾ, ಅಜೀಜ್ ಮತ್ತಿತರರು ಇದ್ದರು. ಶಾಸಕ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ವೇದಿಕೆಯ ಮುಂಭಾಗ ಉಪಸ್ಥಿತರಿದ್ದರು. ಸೂರಜ್ ಹೆಗಡೆ ರಾಹುಲ್ ಭಾಷಣವನ್ನು ಹಿಂದಿಯಿಂದ ಕನ್ನಡಕ್ಕೆ ಭಾಷಾಂತರ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next