ಹೊಸದಿಲ್ಲಿ: ಕಾಂಗ್ರೆಸ್ ನ ಅಧ್ಯಕ್ಷೀಯ ಚುನಾವಣೆಯ ಚಟುವಟಿಕೆಯ ಸದ್ಯ ಬಿರುಸು ಪಡೆದಿದೆ. ರಾಹುಲ್ ಗಾಂಧಿಯೇ ಮುಂದಿನ ಅಧ್ಯಕ್ಷರಾಗಲಿ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿರ್ಣಯ ಮಂಡಿಸಿದ್ದಾರೆ.
ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಸುಮಾರು ನೂರು ದಿನಗಳ ಪಾದಯಾತ್ರೆಯು ಸದ್ಯ ಕೇರಳದಲ್ಲಿದೆ. ಈ ಯಾತ್ರೆಯು ಕನ್ಯಾಕುಮಾರಿಯಿಂದ ಆರಂಭವಾಗಿದ್ದು, ಕಾಶ್ಮೀರದವರೆಗೆ ನಡೆಯಲಿದೆ.
ಜೈಪುರದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಅಜಯ್ ಮಾಕನ್, ಸಂಘಟನೆಯ ಚುನಾವಣಾಧಿಕಾರಿ (ಪಿಆರ್‌ಒ) ರಾಜೇಂದ್ರ ಕುಂಪಾವತ್, ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಪಕ್ಷದ ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ:ಹಾಸ್ಟೆಲ್ ಮೇಟ್ ಗಳ ಖಾಸಗಿ ವಿಡಿಯೋ ಲೀಕ್ ಮಾಡಿದ ವಿದ್ಯಾರ್ಥಿನಿ: ಭಾರೀ ಪ್ರತಿಭಟನೆ; ಬಂಧನ
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಸ್ಥಾನದ ಸಚಿವ ಪಿಎಸ್ ಖಚರಿಯಾವ, “ರಾಜ್ಯ ಮುಖ್ಯಸ್ಥರ ನೇಮಕ ಸೇರಿದಂತೆ ರಾಷ್ಟ್ರೀಯ ಅಧ್ಯಕ್ಷರ (ಸೋನಿಯಾ ಗಾಂಧಿ) ಯಾವುದೇ ನಿರ್ಧಾರವನ್ನು ಕೈಗೊಂಡರೂ ಅದನ್ನು ನಾವು ಸ್ವೀಕರಿಸುತ್ತೇವೆ ಎಂದು ನಿರ್ಣಯವನ್ನು ಅಂಗೀಕರಿಸಲಾಗಿದೆ” ಎಂದು ಹೇಳಿದರು.
“ರಾಹುಲ್ ಗಾಂಧಿ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ನೇಮಿಸಲು ಮುಖ್ಯಮಂತ್ರಿ ಗೆಹ್ಲೋಟ್ ಅವರು ಮತ್ತೊಂದು ನಿರ್ಣಯವನ್ನು ಮಂಡಿಸಿದ್ದಾರೆ” ಎಂದು ಅವರು ಹೇಳಿದರು.