ಬೆಂಗಳೂರು: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸ್ಥಾನ ಹೊಂದಾಣಿಕೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ದೇವೇಗೌಡರೇ ತೀರ್ಮಾನಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಸಿದ್ಧತೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜತೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಶನಿವಾರ ನವದೆಹಲಿಯಲ್ಲಿ ಭೇಟಿ ಮಾಡಿದ ಬಳಿಕ ಅವರು ಮಾತನಾಡಿದ್ದಾರೆ. ಈ ತಿಂಗಳ ಕೊನೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಪೈನಲ್ ಆಗಲಿದೆ. ಸ್ಥಾನ ಹಂಚಿಕೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಯಾಗುವುದಿಲ್ಲ. ಬದಲಾಗಿ ಎರಡೂ ಪಕ್ಷಗಳ ವರಿಷ್ಠರು ತೀರ್ಮಾನಿಸಲಿದ್ದು, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕೂಡ ಇರಲಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಮಾರ್ಚ್ ಮೊದಲ ವಾರದಲ್ಲಿ ಬಹುತೇಕ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಈಗಿನಿಂದಲೇ ಚುನಾವಣೆ ಸಿದ್ಧತೆ ಆರಂಭಿಸುವಂತೆ, ಮೈತ್ರಿಯಡಿ ಚುನಾವಣೆ ಎದುರಿಸಬೇಕಾಗಿರುವುದರಿಂದ ಕಾರ್ಯಕರ್ತರು ಹಾಗೂ ಮುಖಂಡರನ್ನು ಮಾನಸಿಕವಾಗಿ ಅದಕ್ಕೆ ಅಣಿಯಾಗಿಸುವಂತೆ ರಾಹುಲ್‌ಗಾಂಧಿ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿನ ಪ್ರಸಕ್ತ ವಿದ್ಯಮಾನಗಳು, ಆಪರೇಷನ್ ಕಮಲ ಕಾರ್ಯಾಚರಣೆ, ಜಂಟಿ ಅಧಿವೇಶನ, ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಆದ ಘಟನೆಗಳ ಬಗ್ಗೆಯೂ ಇಬ್ಬರೂ ರಾಹುಲ್‌ಗಾಂಧಿಯವರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ಧವಾಗಿದ್ದೇವೆ: ಚುನಾವಣೆ ಸಿದ್ಧತೆ ಕುರಿತು ರಾಹುಲ್‌ಗಾಂಧಿ ಜತೆ ಚರ್ಚಿಸಿದ್ದೇವೆ. ನಾವು ಚುನಾವಣೆಗೆ ಸಿದ್ಧವಾಗಿದ್ದೇವೆ ಎಂದು ಹೇಳಿದ್ದೇನೆ ಎಂದರು. ಜೆಡಿಎಸ್ ಜತೆ ಮೈತ್ರಿ ಹಿನ್ನೆಲೆಯಲ್ಲಿ ಸೀಟು ಹಂಚಿಕೆ ಶೀಘ್ರ ನಡೆಯಬೇಕೆಂದು ಪ್ರಸ್ತಾಪವಾಯಿತು. ಈ ತಿಂಗಳ ಅಂತ್ಯಕ್ಕೆ ಅಂತಿಮಗೊಳಿಸುವ ಬಗ್ಗೆ ತೀರ್ಮಾನವಾಗಿದೆ ಎಂದು ಹೇಳಿದರು.