ಹೊಸದಿಲ್ಲಿ : ದೇಶದ ಅತೀ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ಶುಕ್ರವಾರ, ಎರಡನೇ ಬಾರಿಗೆಂಬಂತೆ, ಲೋಕಸಭೆಯಲ್ಲಿ ರಫೇಲ್ ಕುರಿತ ಬಿಸಿ ಬಿಸಿ ಚರ್ಚೆ ವೇಳೆ, ಸದನದ ಗೌರವವನ್ನು ಕಡೆಗಣಿಸಿ, ಕಣ್ಣು ಹೊಡೆದಿದ್ದಾರೆ.
ಲೋಕಸಭೆಯ ಉಪ ಸ್ಪೀಕರ್ ಎಂ ತಂಬಿ ದುರೈ ಮಾತನಾಡುತ್ತಿದ್ದ ವೇಳೆ ಅವರ ಹಿಂದೆಯೇ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರ ಪಕ್ಕದಲ್ಲೇ, ಕುಳಿತಿದ್ದ ರಾಹುಲ್ ಗಾಂಧಿ ತನ್ನ ಪಕ್ಷದ ಸದಸ್ಯರೊಬ್ಬರತ್ತ ಮುಖ ತಿರುಗಿಸಿ ಕಣ್ಣು ಹೊಡೆದಿರುವ ವಿಡಿಯೋ ಚಿತ್ರಿಕೆಯೊಂದನ್ನು ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ಜುಲೈ ತಿಂಗಳಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿದ್ದ ವಿಶ್ವಾಸ ಮತ ಚರ್ಚೆಯಲ್ಲಿ ಖಡಕ್ ಭಾಷಣ ಮಾಡಿದ ಬಳಿಕ ರಾಹುಲ್, ನೇರವಾಗಿ ಪ್ರಧಾನಿಯತ್ತ ನಡೆದುಕೊಂಡು ಹೋಗಿ ಅವರ ಕೈಕುಲುಕಿ, ಆಲಂಗಿಸಿ, ತನ್ನ ಸೀಟಿಗೆ ಮರಳಿ ಆಸೀನರಾಗುತ್ತಲೇ, ಕಣ್ಣು ಹೊಡೆದಿದ್ದರು ! ನಿನ್ನೆಯದು ರಾಹುಲ್ ಅವರ ಎರಡನೇ ಪ್ರಸಂಗವಾಗಿದೆ. ಸದನದಲ್ಲಿ ಅಂದು ರಾಹುಲ್ ಕಣ್ಣು ಹೊಡೆದ ಪ್ರಸಂಗ ದೇಶಾದ್ಯಂತ ಚರ್ಚೆ, ಖಂಡನೆ, ಟೀಕೆಗೆ ಕಾರಣವಾಗಿತ್ತು.
ಮಾಳವೀಯ ಅವರು ತಮ್ಮ ಟ್ವೀಟ್‌ನಲ್ಲಿ ಹೀಗೆ ಬರೆದಿದ್ದಾರೆ : ರಾಹುಲ್ ಗಾಂಧಿ ಮತ್ತೆ ಕಣ್ಣು ಹೊಡೆದಿದ್ದಾರೆ. ಈ ಬಾರಿ ಸದನದಲ್ಲಿ ರಫೇಲ್ ಡೀಲ್ ಕುರಿತ ಬಿಸಿ ಚರ್ಚೆ ನಡೆಯುತ್ತಿದ್ದಾಗಲೇ ಕಣ್ಣು ಹೊಡೆದಿದ್ದಾರೆ. ಖಂಡಿತವಾಗಿಯೂ ಅವರಿಗೆ ಸಹಾಯ ಬೇಕಿದೆ’.