ಹೊಸದಿಲ್ಲಿ : ಪಂಚರಾಜ್ಯಗಳ ಚುನಾವಣಾ ಹೊಸ್ತಿಲಲ್ಲೇ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ವರ್ಷಾಚರಣೆಗಾಗಿ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನದಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ರಾಹುಲ್ ಗಾಂಧಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ಜತೆಗೆ ಜನವರಿ 3 ರಂದು ಪಂಜಾಬ್ ನಲ್ಲಿ ನಡೆಯುವ ಪಕ್ಷದ ರ್ಯಾಲಿ ಯಶಸ್ವಿಗೊಳಿಸಬೇಕೆಂದು ಸೂಚನೆ ನೀಡಿದ್ದರು.
ಇದನ್ನೂ ಓದಿ:ಕಾಂಗ್ರೆಸ್ ನಿಂದ ಹೊರ ಬಂದರು ನಾನು ಗಾಂಧಿ, ನೆಹರು ತತ್ವಾದರ್ಶಗಳನ್ನ ಬಿಟ್ಟಿಲ್ಲ: ಪವಾರ್
ಆದರೆ ಈಗ ಹಠಾತ್ ವಿದೇಶ ಪ್ರವಾಸಕ್ಕೆ ಹೊರಟಿರುವುದು ಕಾಂಗ್ರೆಸಿಗರನ್ನು ಗೊಂದಲಕ್ಕೆ ಕೆಡವಿದೆ. ಪಂಜಾಬ್ ನಲ್ಲಿ ಆಯೋಜಿಸಿದ್ದ ರ್ಯಾಲಿಯನ್ನೂ ರದ್ದುಗೊಳಿಸಲಾಗಿದೆ. ಜನವರಿ ಮಧ್ಯ ಭಾಗದಲ್ಲಿ ಪಂಚರಾಜ್ಯಗಳ ಚುನಾವಣೆಗೆ ದಿನಾಂಕ ನಿಗದಿಗೊಳಿಸಬಹುದೆಂಬ ನಿರೀಕ್ಷೆಯಲ್ಲಿರುವಾಗಲೇ ರಾಹುಲ್ ವಿದೇಶ ಪ್ರವಾಸ ಕಾಂಗ್ರೆಸ್ ನಾಯಕರನ್ನು ಮುಜುಗರಕ್ಕೆ ದೂಡಿದೆ.
ರಾಹುಲ್ ಯಾವ ದೇಶಕ್ಕೆ ಪ್ರವಾಸ ಹೊರಟಿದ್ದಾರೆ ಎಂಬುದನ್ನು ಕಾಂಗ್ರೆಸ್ ಬಹಿರಂಗಗೊಳಿಸಿಲ್ಲ. ಇದೊಂದು ಕಿರು ವಿದೇಶಪ್ರವಾಸ ಎಂದಷ್ಟೇ ಹೇಳಿದೆ. ಮೂಲಗಳ ಪ್ರಕಾರ ರಾಹುಲ್ ಇಟಲಿಗೆ ಭೇಟಿ ನೀಡಲಿದ್ದಾರೆ. ಈ ವಿಚಾರದಲ್ಲಿ ಅನಗತ್ಯ ಗೊಂದಲ ಹಾಗೂ ವಿವಾದ ಸೃಷ್ಟಿ ಮಾಡುವುದು ಬೇಡ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.