ಕೌಲಾಲಂಪುರ: ಅಂಡರ್-19 ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರವಿವಾರ ಭಾರತ ತಂಡ ನೇಪಾಲದ ಕೈಯಲ್ಲಿ ಆಘಾತಕಾರಿ ಸೋಲನುಭವಿಸಿದ್ದು ದೊಡ್ಡ ಸುದ್ದಿಯಾಗಿದೆ. ನೇಪಾಲ ಪಾಲಿಗೆ ಇದು ಕ್ರಿಕೆಟ್ ಇತಿಹಾಸದ ಅತೀ ದೊಡ್ಡ ಹಾಗೂ ಸ್ಮರಣೀಯ ವಿಜಯ ಎಂಬುದರಲ್ಲಿ ಎರಡು ಮಾತಿಲ್ಲ.
ಈ ಸಂದರ್ಭದಲ್ಲಿ ಭಾರತದ ಕಿರಿಯರ ತಂಡದ ಕೋಚ್ ರಾಹುಲ್ ದ್ರಾವಿಡ್ ವಿಜೇತ ತಂಡವನ್ನು ಅಭಿನಂದಿಸಿ ನಿಜವಾದ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. ನೇಪಾಲ ತಂಡದ ಕೋಚ್ ಬಿನೋದ್ ಕುಮಾರ್ ಇದನ್ನು ಮಾಧ್ಯಮದವರಲ್ಲಿ ಬಹಳ ಖುಷಿಯಿಂದ ಹೇಳಿಕೊಂಡಿದ್ದಾರೆ.
“ರಾಹುಲ್ ದ್ರಾವಿಡ್ ಅವರದು ನಿಜಕ್ಕೂ ವಿನಮ್ರ ವ್ಯಕ್ತಿತ್ವ. ಅವರು ಗೆಲುವಿನ ಬಳಿಕ ನಮ್ಮ ತಂಡದ ಸಾಧನೆಯನ್ನು ಕೊಂಡಾಡಿ ಅಭಿನಂದನೆ ಸಲ್ಲಿಸಿದರು. ಈ ಗೆಲುವಿಗೆ ನೀವು ಬೇರೆಲ್ಲರಿಗಿಂತಲೂ ಹೆಚ್ಚು ಅರ್ಹರಾಗಿದ್ದೀರಿ, ಈ ಕೂಟದಲ್ಲಿ ಉಳಿದವರಿಗಿಂತ ಉತ್ತಮ ಪ್ರದರ್ಶನ ನೀಡಿದಿರಿ ಎಂದು ದ್ರಾವಿಡ್ ನಮ್ಮ ಗೆಲುವನ್ನು ಪ್ರಶಂಸಿಸಿದರು. ಇದರಿಂದ ನಮಗೆ ನಿಜಕ್ಕೂ ರೋಮಾಂಚನವಾಗಿದೆ. ಭಾರತ ಒಂದು ಬಲಾಡ್ಯ ತಂಡ. ಈವರೆಗೆ ನಾವು ಅವರೆದುರು ಯಾವುದೇ ಪಂದ್ಯದಲ್ಲಿ ಗೆದ್ದದ್ದಿಲ್ಲ. ಹೀಗಾಗಿ ನಮ್ಮ ಪಾಲಿಗೆ ಇದು ದೊಡ್ಡ ಗೆಲುವು…’ ಎಂದು ಬಿನೋದ್ ಕುಮಾರ್ ಹೇಳಿದರು.
ರವಿವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಲ 8 ವಿಕೆಟಿಗೆ ಕೇವಲ 185 ರನ್ ಗಳಿಸಿದರೆ, ಭಾರತ 48.1 ಓವರ್‌ಗಳಲ್ಲಿ 166ಕ್ಕೆ ಆಲೌಟ್ ಆಗಿತ್ತು.
ಮಂಗಳವಾರ ನಡೆಯುವ “ಎ’ ವಿಭಾಗದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಸೆಮಿಫೈನಲ್ ಪ್ರವೇಶಿಸಬೇಕಾದರೆ ಭಾರತಕ್ಕೆ ಗೆಲುವು ಅನಿವಾರ್ಯ.