ಮೆಲ್ಬರ್ನ್: ಟಿ20 ಕ್ರಿಕೆಟ್ ನ ನಂಬರ್ 1 ಆಟಗಾರ ಸೂರ್ಯಕುಮಾರ್ ಯಾದವ್ ಸದ್ಯ ಸೂಪರ್ ಫಾರ್ಮ್ ನಲ್ಲಿದ್ದಾರೆ. ಟಿ20 ವಿಶ್ವಕಪ್ ಕೂಟದಲ್ಲೂ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿರುವ ಭಾರತದ ಮಧ್ಯಮ ಕ್ರಮಾಂಕದ ಬಲಗೈ ಆಟಗಾರ ರವಿವಾರ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲೂ ಅರ್ಧ ಶತಕ ಬಾರಿಸಿ ಮಿಂಚಿದರು.
ಸೂರ್ಯ ಕುಮಾರ್ ಯಾದವ್ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, “ಅವರು ನಮ್ಮ ಅಸಾಧಾರಣ ಬ್ಯಾಟರ್. ಅವರ ಬ್ಯಾಟಿಂಗ್ ನೋಡುವುದೇ ಸಂತೋಷ. ಅವರು ಆ ರೀತಿಯ ಫಾರ್ಮ್ ನಲ್ಲಿರುವಾಗ ಬ್ಯಾಟಿಂಗ್ ಮಾಡುವುದನ್ನು ನೋಡಲು ಖುಷಿಯಾಗುತ್ತದೆ. ಪ್ರತಿ ಬಾರಿಯೂ, ಅವರಿಲ್ಲಿ ಪ್ರದರ್ಶನವೊಂದನ್ನು ಆಯೋಜನೆ ಮಾಡಿದಂತೆ ಆಡುತ್ತಾರೆ” ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸೂರ್ಯ ಕೇವಲ 25 ಎಸೆತಗಳಲ್ಲಿ ಅಜೇಯ 61 ರನ್ ಬಾರಿಸಿದರು. ಈ ಬಗ್ಗೆ ಮಾತನಾಡಿದ ದ್ರಾವಿಡ್, “ಈ ರೀತಿಯ ಸ್ಟ್ರೈಕ್ ರೇಟ್ ನಲ್ಲಿ ಸ್ಥಿರವಾಗಿ ಆಡುವುದು ಸುಲಭವಲ್ಲ. ಸೂರ್ಯ ಆಡುತ್ತಿರುವ ರೀತಿ ಅದ್ಭುತವಾಗಿದೆ. ಸೂರ್ಯ ತಮ್ಮ ತಂತ್ರಗಳ ಬಗ್ಗೆ ತುಂಬಾ ಸ್ಪಷ್ಟವಾಗಿದ್ದಾರೆ” ಎಂದರು.
ಇದನ್ನೂ ಓದಿ:ಮಹಾರಾಷ್ಟ್ರದತ್ತ ಭಾರತ್ ಜೋಡೋ ಯಾತ್ರೆ: ರಾಹುಲ್ ಜತೆ ಸೇರುತ್ತಾರಾ ಉದ್ಧವ್ ಠಾಕ್ರೆ
ಈ ಬಾರಿಯ ವಿಶ್ವಕಪ್ ನಲ್ಲಿ ಈಗಾಗಲೇ 225 ರನ್ ಗಳಿಸಿರುವ ಸೂರ್ಯ, ಭಾರತ ತಂಡದಲ್ಲಿ ಎರಡನೇ ಅತಿ ಹೆಚ್ಚು ಸ್ಕೋರರ್ ಆಗಿದ್ದಾರೆ. ವಿರಾಟ್ ಕೊಹ್ಲಿ (246) ಮಾತ್ರ ಅವರಿಗಿಂತ ಹೆಚ್ಚು ಸ್ಕೋರ್ ಮಾಡಿದ್ದಾರೆ. ಆದರೆ ಸೂರ್ಯ ಕುಮಾರ್ ಯಾದವ್ 193.96 ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ.