Advertisement
ಭಾರತದ ಬ್ಯಾಟಿಂಗ್ ಸರದಿಗೆ ಚೈತನ್ಯ ತುಂಬಿದ ಈ ಬ್ಯಾಟ್ಸ್‌ಮನ್‌ಗಳು ಬೇರ್ಯಾರೂ ಅಲ್ಲ, ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ. ಇವರಿಬ್ಬರು ಟೆಸ್ಟ್ ಪ್ರವೇಶಗೈದು ರವಿವಾರಕ್ಕೆ ಭರ್ತಿ 25 ವರ್ಷ. ಬೆಳ್ಳಿ ಹಬ್ಬದ ಸಂಭ್ರಮ!
1996ರ ಜೂನ್ 20ರಂದು ಆರಂಭಗೊಂಡ ಈ ಟೆಸ್ಟ್ ಪಂದ್ಯ ಭಾರತಕ್ಕೆ ಭಾರೀ ಸವಾಲಿನದ್ದಾಗಿತ್ತು. ಬರ್ಮಿಂಗ್‌ಹ್ಯಾಮ್‌ನಲ್ಲಿ ಎದುರಾದ 8 ವಿಕೆಟ್ ಸೋಲಿನಿಂದ ಅಜರ್ ಪಡೆ ಹೊರಬರಬೇಕಿತ್ತು. ಇಂಥ ಪರಿಸ್ಥಿತಿಯಲ್ಲಿ ಚೊಚ್ಚಲ ಟೆಸ್ಟ್ ಆಡಲಿಳಿದಿದ್ದ ಈ ಯುವ ಬ್ಯಾಟ್ಸ್‌ಮನ್‌ಗಳಿಬ್ಬರೂ ಈ ಜವಾಬ್ದಾರಿಯನ್ನು ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸಿದರು. ವನ್‌ಡೌನ್‌ನಲ್ಲಿ ಬ್ಯಾಟ್ ಹಿಡಿದು ಬಂದ ಎಡಗೈ ಆಟಗಾರ ಗಂಗೂಲಿ 435 ನಿಮಿಷಗಳ ಕಾಲ ಕ್ರೀಸ್ ಆಕ್ರಮಿಸಿಕೊಂಡು 131 ರನ್ ಪೇರಿಸಿ ಲಾರ್ಡ್ಸ್ ಹೀರೋ ಎನಿಸಿದರು. ಭವಿಷ್ಯದಲ್ಲಿ “ಗೋಡೆ’ ಎನಿಸಿಕೊಂಡು ತಂಡದ ಬೆನ್ನೆಲುಬಾಗಿ ನಿಂತ ದ್ರಾವಿಡ್ ಅಂದು ಕ್ರೀಸ್ ಇಳಿದದ್ದು 7ನೇ ಕ್ರಮಾಂಕದಲ್ಲಿ! ಅವರೇ ಕೊನೆಯ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿದ್ದರು. ಆದರೆ ಅಂದೇ ಕ್ರೀಸಿಗೆ ಅಂಟಿಕೊಂಡು ನಿಲ್ಲುವ ಸಾಮರ್ಥ್ಯವನ್ನು ಸಾಬೀತುಪಡಿಸಿದ ದ್ರಾವಿಡ್ 267 ಎಸೆತಗಳಿಂದ ಬಹುಮೂಲ್ಯ 95 ರನ್ ಕೊಡುಗೆ ಸಲ್ಲಿಸಿದರು. ಐದೇ ರನ್ನಿನಿಂದ ಶತಕ ತಪ್ಪಿತ್ತು.
Related Articles
Advertisement
ಮುಂದಿನದು ಇತಿಹಾಸ.
ನಂಟು ಮುಂದುವರಿದಿದೆ…ಈಗಲೂ ದ್ರಾವಿಡ್, ಗಂಗೂಲಿ ಆಟ ಟೀಮ್ ಇಂಡಿಯಾ ಆಟಗಾರರಿಗೊಂದು ಸ್ಫೂರ್ತಿ. ಈಗಲೂ ಇವರು ಕ್ರಿಕೆಟ್ ನಂಟು ಹೊಂದಿರುವುದು ಭಾರತದ ಕ್ರಿಕೆಟಿಗೊಂದು ಶಕ್ತಿ. ಗಂಗೂಲಿ ಬಿಸಿಸಿಐ ಅಧ್ಯಕ್ಷರಾದರೆ, ದ್ರಾವಿಡ್ ಕಿರಿಯರಿಗೆ ಕೋಚಿಂಗ್ ನೀಡುತ್ತ ಈಗ ಟೀಮ್ ಇಂಡಿಯಾ ಕೋಚ್ ಆಗಿ ಭಡ್ತಿ ಪಡೆದಿದ್ದಾರೆ. ಇವರಿಬ್ಬರ ಬ್ಯಾಟಿಂಗ್ ಮಹಾಯಾನವನ್ನು ಮೆಲುಕು ಹಾಕುವುದೇ ಒಂದು ರೋಮಾಂಚನ, ಖುಷಿಯ ಸಿಂಚನ!