ಮುಂಬೈ: ಟೀಂ ಇಂಡಿಯಾ ಜೊತೆಗಿನ ಕೋಚಿಂಗ್ ಅವಧಿ ಮುಗಿದ ಬಳಿಕ ರಾಹುಲ್ ದ್ರಾವಿಡ್ (Rahul Dravid) ಅವರು ಇದೀಗ ಮತ್ತೆ ರಾಜಸ್ಥಾನ ರಾಯಲ್ಸ್ ಗೆ ಮರಳಿದ್ದಾರೆ. ಈ ಹಿಂದೆ ರಾಜಸ್ಥಾನ ರಾಯಲ್ಸ್ (Rajasthan Royals) ತಂಡದಲ್ಲಿ ಆಟಗಾರನಾಗಿ, ಬಳಿಕ ಮೆಂಟರ್ ಆಗಿದ್ದ ರಾಹುಲ್ ಇದೀಗ ಮತ್ತೆ ಅದೇ ಫ್ರಾಂಚೈಸಿಗೆ ಮರಳಿದ್ದಾರೆ.
ದ್ರಾವಿಡ್ ಮೊದಲು 2011 ರಿಂದ 2013 ರವರೆಗೆ ಆಟಗಾರ ಮತ್ತು ನಾಯಕರಾಗಿ ರಾಯಲ್ಸ್ ಭಾಗವಾಗಿದ್ದರು. ಅವರ ನಿವೃತ್ತಿಯ ನಂತರ, ರಾಯಲ್ಸ್ 2 ವರ್ಷಗಳ ಅಮಾನತು ಎದುರಿಸುವ ಮೊದಲು ಅವರು 2014 ಮತ್ತು 2015 ರ ಸೀಸನ್‌ಗಳಿಗೆ ಮೆಂಟರ್ ಪಾತ್ರ ವಹಿಸಿಕೊಂಡಿದ್ದರು.
ಇದೀಗ ಟಿ20 ವಿಶ್ವಕಪ್ ಗೆಲುವಿನ ಮೂಲಕ ಟೀಂ ಇಂಡಿಯಾದ ಐಸಿಸಿ ಟ್ರೋಫಿ ಬರ ನೀಗಿಸಿದ ಯಶಸ್ವಿ ಕೋಚ್ ರಾಹುಲ್ ದ್ರಾವಿಡ್ ಅವರು ರಾಯಲ್ಸ್ ಸೆಟಪ್ ಗೆ ಮರಳಿದ್ದಾರೆ.
ಯಶಸ್ವಿ ಕೋಚ್ ಅವರನ್ನು ಸೇರಿಸಿಕೊಳ್ಳಲು ಹಲವು ಐಪಿಎಲ್ ಫ್ರಾಂಚೈಸಿಗಳು ಪ್ರಯತ್ನಿಸಿದೆ ಎಂದು ವರದಿಯಾಗಿದೆ. ಕ್ರಿಕ್ ಬಜ್ ವರದಿಯಂತೆ, ದ್ರಾವಿಡ್ ಅವರಿಗೆ ಕೆಲವು ಫ್ರಾಂಚೈಸಿಗಳಿಂದ ಖಾಲಿ ಚೆಕ್ ಒಳಗೊಂಡಂತೆ ಕೆಲವು ಉನ್ನತ-ಪ್ರೊಫೈಲ್ ಆಫರ್ ನೀಡಲಾಗಿದೆ. ಆದರೆ, ಅವರು ರಾಜಸ್ಥಾನ ರಾಯಲ್ಸ್ ಗೆ ನಿಷ್ಠರಾಗಿರಲು ನಿರ್ಧರಿಸಿದರು. ಅವರು ಹಿಂದೆ ಆಟಗಾರನಾಗಿ ದೀರ್ಘಕಾಲ ಕಳೆದಿದ್ದ ಫ್ರಾಂಚೈಸಿಗೆ ಮರಳಿದರು.
9 ವರ್ಷಗಳ ಬಳಿಕ ರಾಹುಲ್ ದ್ರಾವಿಡ್ ಅವರು ರಾಜಸ್ಥಾನ ತಂಡಕ್ಕೆ ಮರಳಿದ್ದಾರೆ. ಎರಡು ವರ್ಷಗಳ ಕಾಲ ರಾಜಸ್ತಾನ ತಂಡವು ಅಮಾನತಾದ ಬಳಿಕ ರಾಹುಲ್ ಡೆಲ್ಲಿ ಡೇರ್ ಡೆವಿಲ್ಸ್ (2016-17) ತಂಡದ ತರಬೇತುದಾರರಾಗಿ ಸೇರಿದ್ದರು. ಆ ಬಳಿಕ ಬಿಸಿಸಿಐ ಜತೆ ಸೇರಿದರು.
ಮೊದಲು ಭಾರತ ಅಂಡರ್ 19 ಮತ್ತು ಇಂಡಿಯಾ ಎ ತಂಡದ ಮುಖ್ಯ ಕೋಚ್ (2015-19) ಆಗಿದ್ದರು. ಬಳಿಕ ಎನ್ ಸಿಎ ಅಧ್ಯಕ್ಷರಾಗಿದ್ದರು. (2019-2021) ಆ ಬಳಿಕ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದಾರೆ.