Advertisement

ಟೀಮ್ ಇಂಡಿಯಾ ನೂತನ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ

11:07 PM Nov 03, 2021 | Team Udayavani |

ಹೊಸದಿಲ್ಲಿ: ನಿರೀಕ್ಷೆಯಂತೆ ಬ್ಯಾಟಿಂಗ್‌ ದಂತಕತೆ ರಾಹುಲ್‌ ದ್ರಾವಿಡ್‌ ಭಾರತ ಕ್ರಿಕೆಟ್‌ ತಂಡದ ಮುಖ್ಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ಇದನ್ನು ಬಿಸಿಸಿಐ ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. ಟಿ20 ವಿಶ್ವಕಪ್‌ ಮುಗಿದ ಅನಂತರ ಅವರ ಕಾರ್ಯಾವಧಿ ಆರಂಭವಾಗಲಿದೆ. 2023ರಲ್ಲಿ ಭಾರತದಲ್ಲೇ ನಡೆಯುವ ಏಕದಿನ ವಿಶ್ವಕಪ್‌ ತನಕ ಅವರು ಈ ಹುದ್ದೆಯಲ್ಲಿರಲಿದ್ದಾರೆ.

Advertisement

ಭಾರತ ಕಂಡ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿರುವ ದ್ರಾವಿಡ್‌ ಇಲ್ಲಿಯವರೆಗೆ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಅಧ್ಯಕ್ಷರಾಗಿದ್ದರು. ಇನ್ನು ಮುಂದೆ ಆ ಸ್ಥಾನಕ್ಕೆ ಲಕ್ಷ್ಮಣ್‌ ಆಯ್ಕೆಯಾಗುವ ನಿರೀಕ್ಷೆಯಿದೆ. ವಿಶೇಷವೆಂದರೆ, ದ್ರಾವಿಡ್‌ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ಅನಂತರ ಪೈಪೋಟಿಯನ್ನೇ ಎದುರಿಸಬೇಕಾಗಿ ಬರಲಿಲ್ಲ. ಬಿಸಿಸಿಐ ಮಟ್ಟಿಗೆ ಅವರು ಪ್ರಶ್ನಾತೀತ ಆಯ್ಕೆಯಾಗಿದ್ದರು. ಅಂತೆಯೇ ಬುಧವಾರ ಕ್ರಿಕೆಟ್‌ ಸಲಹಾ ಸಮಿತಿ ಅವಿರೋಧವಾಗಿ ದ್ರಾವಿಡ್‌ ಅವರನ್ನು ಆಯ್ಕೆ ಮಾಡಿತ್ತು.

ಟಿ20 ವಿಶ್ವಕಪ್‌ ಆರಂಭಕ್ಕೆ ಎರಡು ದಿನಗಳ ಮುನ್ನ ಯುಎಇಯಲ್ಲಿ ಐಪಿಎಲ್‌ ಮುಗಿದಿತ್ತು. ಆ ವೇಳೆಯೇ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜಯ್‌ ಶಾ ಅವರು ರಾಹುಲ್‌ ದ್ರಾವಿಡ್‌ರೊಂದಿಗೆ ಮಾತನಾಡಿ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಮನ ಒಲಿಸಿದ್ದರು. ಆ ಸ್ಥಾನಕ್ಕೆ ದ್ರಾವಿಡ್‌ರಂತಹ ಇನ್ನೊಬ್ಬ ವ್ಯಕ್ತಿ ಇಲ್ಲ ಎನ್ನುವ ನಂಬಿಕೆ ಅವರಿಬ್ಬರದ್ದು. ಆರಂಭದಲ್ಲಿ ಕೋಚ್‌ ಹುದ್ದೆ ನಿರಾಕರಿಸಿದ್ದ ದ್ರಾವಿಡ್‌, ಈಗ ಅದಕ್ಕೆ ಮಾನಸಿಕವಾಗಿ ಸಿದ್ಧವಾಗಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್‌: ಸೆಮಿಫೈನಲ್‌ನತ್ತ ಕಿವೀಸ್‌ ದಾಪುಗಾಲು

ವಿಶ್ವಕಪ್‌ ಮುಗಿದ ಅನಂತರ ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಸರಣಿಯೇ ದ್ರಾವಿಡ್‌ ಅವರ ಮೊದಲ ಜವಾಬ್ದಾರಿ.ಪ್ರಸ್ತುತ ವಿಶ್ವಕಪ್‌ನಲ್ಲಿ ಭಾರತ ನೀಡಿರುವ ಕಳಪೆ ಪ್ರದರ್ಶನಗಳಿಗೆ ಕಾರಣ ಹುಡುಕಿ ಅದನ್ನು ತಿದ್ದುವ ಹೊಣೆಗಾರಿಕೆ ಅವರ ಮುಂದಿದೆ. ಟಿ20 ತಂಡದ ನಾಯಕತ್ವ ತೊರೆಯಲಿರುವ ವಿರಾಟ್‌ ಕೊಹ್ಲಿ, ಏಕದಿನ ತಂಡದ ನಾಯಕತ್ವದಿಂದಲೂ ಕೆಳಕ್ಕಿಳಿಯುವ ಸಾಧ್ಯತೆಯಿದೆ. ಹೀಗಾಗಿ ರಾಹುಲ್‌ಗೆ ರೋಹಿತ್‌ ಶರ್ಮ ಜೋಡಿಯಾಗಬಹುದು.

Advertisement

ಹೊಸ ತರಬೇತುದಾರನಾಗಿ ಆಯ್ಕೆಯಾಗಿರುವುದು ನನಗೊಂದು ದೊಡ್ಡ ಗೌರವ. ಈ ಜವಾಬ್ದಾರಿ ಹೊತ್ತುಕೊಳ್ಳುವುದಕ್ಕೆ ಕಾತುರಗೊಂಡಿದ್ದೇನೆ. ಇಲ್ಲಿಯವರೆಗೆ ರವಿಶಾಸ್ತ್ರಿಯವರ ಗರಡಿಯಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಭರವಸೆ ಇದೆ.
-ರಾಹುಲ್‌ ದ್ರಾವಿಡ್‌,
ಮುಂದಿನ ಭಾರತೀಯ ಕ್ರಿಕೆಟ್‌ ತಂಡದ ಕೋಚ್‌

Advertisement

Udayavani is now on Telegram. Click here to join our channel and stay updated with the latest news.

Next